ಮಡಿಕೇರಿ : ಭುಜದ ನೋವಿಗೆ ಇಂಜೆಕ್ಷನ್ ತೆಗೆದುಕೊಂಡು ಯುವಕ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗ್ರಾಮದ ನಿವಾಸಿ ಶೇಖರ್ ಪುತ್ರ ವಿನೋದ್ ಎಂದು ಗುರುತಿಸಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದು, ಮೃತ ದೇಹವನ್ನ ಸದ್ಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಏನಿದು ಘಟನೆ
ವಿನೋದ್ ಭುಜದ ನೋವಿನಿಂದ ಬಳಲುತ್ತಿದ್ದರು. ಹಾಗಾಗಿ ಚಿಕಿತ್ಸೆ ಪಡೆಯಲೆಂದು ಸುಂಟಿಕೊಪ್ಪದಲ್ಲಿರುವ ಖಾಸಗಿ ಕ್ಲಿನಿಕ್ ಗೆ ಬಂದಿದ್ದಾರೆ. ಯುವಕನನ್ನಪರೀಕ್ಷಿಸಿದ ವೈದ್ಯ ಯಶೋಧರ್ ಪೂಜಾರಿ ಇಂಜೆಕ್ಷನ್ ಕೊಟ್ಟು ಮಾತ್ರೆ ನೀಡಿದ್ದಾರೆ.
ಆದರೂ ನೋವು ಕಡಿಮೆಯಾಗದ ಹಿನ್ನೆಲೆ ಮತ್ತೊಂದು ಇಂಜೆಕ್ಷನ್ ನೀಡಿದ್ದಾರೆ. ಆದರೆ ಮನೆಗೆ ಬಂದ ಕೂಡಲೇ ವಿನೋದ್ ಅಸ್ವಸ್ಥರಾಗಿ ಬಿದ್ದಿದ್ದು, ಕೂಡಲೇ ಸ್ಥಳೀಯರು ಆಟೋದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಷ್ಟರಲ್ಲೇ ವಿನೋದ್ ಪ್ರಾಣಪಕ್ಷಿ ಹಾರಿ ಹೋಗಿದೆ. ವಿನೋದ್ ಗೆ ಭುಜದ ನೋವು ಬಿಟ್ಟರೆ ಯಾವುದೇ ಸಮಸ್ಯೆ ಇರಲಿಲ್ಲ ವೈದ್ಯರು ಇಂಜೆಕ್ಷನ್ ಕೊಟ್ಟಿದ್ದಕ್ಕೆ ಹೀಗೆ ಆಗಿದೆ ಎಂದು ವಿನೋದ್ ಕುಟುಂಬದವರು ಆಕ್ರೋಶ ಹೊರ ಹಾಕಿದ್ದಾರೆ. ಅದೇನೆ ಇರಲಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ವಿನೋದ್ ಸಾವಿಗೆ ಕಾರಣ ತಿಳಿದು ಬರಲಿದೆ.
