ಬೆಂಗಳೂರು: ಬೆಂಗಳೂರಿನಲ್ಲಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೇಸ್ಬುಕ್ ನಲ್ಲಿ ಗುಪ್ತಾಂಗದ ಫೋಟೋ, ವಿಡಿಯೋ ಕಳುಹಿಸಿ ನಟಿಗೆ ಕಿರುಕುಳ ನೀಡಲಾಗಿದೆ.
ತೆಲುಗು ಮತ್ತು ಕನ್ನಡ ಧಾರವಾಹಿಯಲ್ಲಿ ನಟಿಸಿರುವ ಸಂತ್ರಸ್ತೆಗೆ ಆರೋಪಿ ಕಳೆದ ಮೂರು ತಿಂಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ. ಫೇಸ್ ಬುಕ್ ನಲ್ಲಿ ಮೊದಲು ಆರೋಪಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆದರೆ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆಯಲ್ಲಿ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಿದ್ದಾನೆ. ಮೆಸೇಜ್ ಮಾಡದಂತೆ ಆರೋಪಿಗೆ ನಟಿ ಎಚ್ಚರಿಕೆ ಕೂಡ ನೀಡಿದ್ದರು.
ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಬ್ಲಾಕ್ ಮಾಡಿದ್ದರು. ನಂತರ ಬೇರೆ ಐಡಿಯಿಂದ ಅಶ್ಲೀಲ ವಿಡಿಯೋ, ಗುಪ್ತಾಂಗದ ಫೋಟೋ ಕಳುಹಿಸಿ ವಿಕೃತಿ ಮೆರೆದಿದ್ದಾನೆ. ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಆರೋಪಿಗೆ ನಟಿ ಬುದ್ಧಿ ಹೇಳಿದ್ದಾರೆ. ನವೆಂಬರ್ 1ರಂದು ನಾಗರಬಾವಿಯ ಬಳಿ ಆರೋಪಿಯನ್ನು ನಟಿ ಭೇಟಿಯಾಗಿದ್ದರು. ಅಂದು ಬೆಳಗ್ಗೆ 11:30ಕ್ಕೆ ನಂದನ್ ಪ್ಯಾಲೇಸ್ ಸಮೀಪ ಭೇಟಿಯಾಗಿ ಈ ರೀತಿ ಮೆಸೇಜ್ ಮಾಡುವುದು ಬೇಡ ಎಂದು ಹೇಳಿದ್ದಾರೆ. ಆದರೆ ಮತ್ತೆ ಅದೇ ರೀತಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಟಿ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ..
