ಬೆಂಗಳೂರು: ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಉಳಿಕೆ ಮೂಲವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ನ.14ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 33 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ವ್ಯವಸ್ಥಾಪಕರು (ಗ್ರೂಪ್ ಎ, 4 ಹುದ್ದೆಗಳು), ಸಹಾಯಕ ವ್ಯವಸ್ಥಾಪಕರು (ಗ್ರೂಪ್ ಬಿ, 5 ಹುದ್ದೆ), ಹಿರಿಯ ಸಹಾಯಕರು (ಗ್ರೂಪ್ ಸಿ, 5 ಹುದ್ದೆ), ಕಿರಿಯ ಸಹಾಯಕರು (ಗ್ರೂಪ್ ಸಿ, 13 ಹುದ್ದೆ), ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್- ಗ್ರೂಪ್ ಎ, 1 ಹುದ್ದೆ), ಸಹಾಯಕ ಅಭಿಯಂತರರು (ಸಿವಿಲ್- ಗ್ರೂಪ್ ಬಿ, 3 ಹುದ್ದೆ), ಸಹಾಯಕ ಅಭಿಯಂತರರು (ವಿದ್ಯುತ್- ಗ್ರೂಪ್ ಬಿ, 2 ಹುದ್ದೆ) ಇವುಗಳಿಗೆ ಅರ್ಜಿ ಕರೆಯಲಾಗಿದೆ.
ಈ ಮುನ್ನ ಅ.8ರಂದು ಅಧಿಸೂಚನೆ ಹೊರಡಿಸಿದ್ದ ವಿವಿಧ ಸರ್ಕಾರಿ ಇಲಾಖೆ/ಸಂಸ್ಥೆಗಳ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನ.14ರವರೆಗೆ ಅವಕಾಶವಿದೆ. ಅಭ್ಯರ್ಥಿಗಳು ಶುಲ್ಕವನ್ನು ನ.15ರೊಳಗೆ ಪಾವತಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
