ವಿಜಯಪುರ: ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ವಿಜಯಪುರ ತಾಲೂಕಿನ ಕನ್ನೊಳ್ಳಿ ಗ್ರಾಮದ ಸಮೀಪ ಇರುವ ವಿಜಯಪುರ -ಕಲಬುರಗಿ ಟೋಲ್ ನಲ್ಲಿ ಘಟನೆ ನಡೆದಿದೆ.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಸಮರ್ಥ ಗೌಡ ಪಾಟೀಲ್ ಮತ್ತು ಆತನ ಸ್ನೇಹಿತರು ಟೋಲ್ ಸಿಬ್ಬಂದಿಯನ್ನು ಥಳಿಸಿದ್ದಾರೆ. ಹಲ್ಲೆಗೊಳಗಾದ ಟೋಲ್ ಸಿಬ್ಬಂದಿ ಸಂಗಪ್ಪ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಯಪುರದಿಂದ ಕಪ್ಪು ಬಣ್ಣದ ಥಾರ್ ವಾಹನದಲ್ಲಿ ಸಿಂದಗಿ ಕಡೆಗೆ ಹೊರಟಿದ್ದ ಸಮರ್ಥ ಗೌಡ ಪಾಟೀಲ್ ಅವರು ಟೋಲ್ ಗೇಟ್ ನಲ್ಲಿ ಸಿಬ್ಬಂದಿ ಹಣ ಕೇಳಿದ್ದಕ್ಕೆ ನಾನು ವಿಜು ಗೌಡ ಅವರ ಮಗ ಎಂದು ಹೇಳಿದ್ದಾನೆ. ಯಾವ ವಿಜುಗೌಡ ಎಂದು ಟೋಲ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಈ ವೇಳೆ ಕಾರ್ ನಿಲ್ಲಿಸಿ ಸಿಬ್ಬಂದಿ ಸಂಗಪ್ಪ ಬಳಿಗೆ ಬಂದ ಸಮರ್ಥ ಗೌಡ ಮತ್ತು ಆತನ ಸ್ನೇಹಿತರು ಥಳಿಸಿದ್ದಾರೆ.
ಬಳಿಕ ಟೋಲ್ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಜುಗೌಡ ಪಾಟೀಲ್, ಮಗನ ಮುಂದೆ ತಂದೆಗೆ ಬೈದರೆ ಯಾರಿಗೆ ಸಿಟ್ಟು ಬರುವುದಿಲ್ಲ ಹೇಳಿ? ಟೋಲ್ ಸಿಬ್ಬಂದಿ ನನ್ನ ಮಗನ ಮುಂದೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ತಿಳಿಸಿದ್ದಾರೆ. ನನ್ನ ಮಗ ಮಾಡಿದ್ದು ತಪ್ಪು, ಸಿಬ್ಬಂದಿ ಕೂಡ ಆ ರೀತಿ ಮಾತನಾಡಿದ್ದು ತಪ್ಪು. ಅವರು ಕೇಸು ದಾಖಲಿಸಿದ್ರೆ ನಾವು ಕೇಸು ದಾಖಲಿಸುತ್ತೇವೆ. ನನ್ನ ಮಗನ ಪರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಇದರಲ್ಲಿ ರಾಜಕೀಯ ಪ್ರವೇಶವಾಗಿ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.

 
			 
		 
		 
		 
		 Loading ...
 Loading ... 
		 
		 
		