ಮಡಿಕೇರಿ: ಪ್ರೀತಿಸಿದ ಹುಡುಗಿಯ ಮದುವೆ ಲಗ್ನಪತ್ರಿಕೆ ನೋಡಿ ಮನನೊಂದ ಯುವಕ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದ ಪೆಗ್ಗರಿಕಾಡು ಗ್ರಾಮದಲ್ಲಿ ನಡೆದಿದೆ.
ಪೈಸಾರಿ ನಿವಾಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಿ. ಹೆಚ್.ಎಂ. ಕಾಳಯ್ಯ ಅವರ ಪುತ್ರ ಹೆಚ್.ಕೆ. ಸುಮಂತ್(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಾಳಯ್ಯ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾನೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಸುಮಂತ್ ಕೆಲವು ವರ್ಷಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯನ್ನು ಒನ್ ಸೈಡ್ ಲವ್ ಮಾಡುತ್ತಿದ್ದ. ಈತನ ಕಾಟದ ಬಗ್ಗೆ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ನಂತರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮಂತ್ ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಬಂದಿದ್ದ. ಖಾಸಗಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಲಗ್ನ ಪತ್ರಿಕೆ ನೋಡಿದ ಆತನಿಗೆ ಪ್ರೀತಿಸಿದ ಹುಡುಗಿ ಮದುವೆ ನಿಗದಿಯಾದ ದಿನಾಂಕ ಗೊತ್ತಾಗಿದೆ. ಅಕ್ಟೋಬರ್ 18ರಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸುಮಂತ್ ನನ್ನು ಆತನ ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುಮಂತ್ ಮೃತಪಟ್ಟಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
