ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಕರ್ನಾಟಕ ಬ್ಯಾಂಕ್ ನಲ್ಲಿ ಸಿಬ್ಬಂದಿಯಿಂದಲೇ ಗ್ರಾಹಕರಿಗೆ ವಂಚನೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಯಾಂಕ್ ನಲ್ಲಿ ಗ್ರಾಹಕ ಸೇವಾ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಶ್ರೀಧರ ಭಟ್ಟ ವಂಚಿಸಿದ ಆರೋಪಿಯಾಗಿದ್ದಾರೆ. ಸಿದ್ದಾಪುರ ತಾಲೂಕಿನ ಹೆಗ್ಗರಣೆ ಗ್ರಾಹಕರೊಬ್ಬರು ಬ್ಯಾಂಕ್ ನಲ್ಲಿಟ್ಟಿದ್ದ ನಿಶ್ಚಿತ ಠೇವಣಿ ನವೀಕರಣಕ್ಕೆ ಹೋದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಬ್ಯಾಂಕ್ ನ ದಾಖಲೆಯಲ್ಲಿ ನಿಶ್ಚಿತ ಠೇವಣಿಯಲ್ಲಿದ್ದ ಮೊತ್ತವನ್ನು ಗ್ರಾಹಕರ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ ಎಂದು ನಮೂದಿಸಲಾಗಿದೆ. ಆದರೆ, ಉಳಿತಾಯ ಖಾತೆಯಲ್ಲಿ ಹಣವಿಲ್ಲ. ಇದನ್ನು ಪರಿಶೀಲಿಸಿದಾಗ ಆರೋಪಿಯ ಬ್ಯಾಂಕ್ ಖಾತೆಗೆ ಗ್ರಾಹಕರ ನಿಶ್ಚಿತ ಠೇವಣಿಗೆ ಮೊತ್ತ ಜಮಾ ಆಗಿತ್ತು. ಈ ಕುರಿತು ಬ್ಯಾಂಕ್ ಆಂತರಿಕ ತನಿಖೆ ನಡೆಸಿದ್ದು, 2024ರ ಸೆಪ್ಟೆಂಬರ್ 21ರಿಂದ 2025 ರ ಸೆಪ್ಟೆಂಬರ್ 23ರವರೆಗೆ 3.35 ಕೋಟಿ ರೂ. ಗಿಂತ ಹೆಚ್ಚು ಹಣ ಬೇರೆ ಬೇರೆ ಗ್ರಾಹಕರ ಖಾತೆಯಿಂದ ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಗ್ರಾಹಕರ ಠೇವಣಿಗಳನ್ನು ಅವಧಿ ಪೂರ್ವ ಕ್ಲೋಸ್ ಮಾಡಿರುವುದು, ಎಸ್ಎಂಎಸ್ ಅಲರ್ಟ್ ಸೇವೆ ತೆಗೆದು, ನಕಲಿ ಠೇವಣಿ ರಸೀದಿ ಬಳಸಿ ಗ್ರಾಹಕರಿಗೆ ನೀಡಿದಂತೆ ತೋರಿಸಿ ಆರೋಪಿ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತಾಗಿ ಸಿದ್ದಾಪುರ ಠಾಣೆಗೆ ದೂರು ನೀಡಲಾಗಿದೆ.
