ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಾಚರ್ ಕಾರಾಗೃಹಕ್ಕೆ ಒಳಉಡುಪಿನಲ್ಲಿ ಮೊಬೈಲ್ ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಬಂದಿತರಾಗಿದ್ದಾರೆ.
ಜೈಲು ವಾಚರ್ ಅಮರ್ ಪ್ರಾಂಜೆ ಬಂಧಿತ ಆರೋಪಿ. ಜೈಲಿನ ಕರ್ತವ್ಯಕ್ಕೆ ಬಂದಿದ್ದ ಅಮರ್ ನನ್ನು ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ನಂತರ ಕಾರಾಗೃಹದ ಅಧೀಕ್ಷಕ ಪರಮೇಶ್ವರ್ ಅವರು ನೀಡಿದ ದೂರಿನ ಮೇರೆಗೆ ಅಮರ್ ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೈಲಿನಲ್ಲಿದ್ದ ಕೈದಿಯೊಬ್ಬನಿಂದ ಹಣ ಪಡೆದು 20,000 ರೂ. ಮೌಲ್ಯದ ಮೊಬೈಲ್ ತಂದುಕೊಡಲು ಅಮರ್ ಒಪ್ಪಿಕೊಂಡಿದ್ದರು. ಪ್ರತಿದಿನದಂತೆ ಕೆಲಸಕ್ಕೆ ಬಂದಿದ್ದ ಅವರನ್ನು ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಲು ಭದ್ರತಾ ಸಿಬ್ಬಂದಿ ಮುಂದಾಗಿದ್ದಾರೆ. ಅವರು ಗಾಬರಿಯಿಂದ ಹಿಂದೆ ಸರಿದು ಹೋಗಿದ್ದಾರೆ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಮೊಬೈಲ್ ಪತ್ತೆಯಾಗಿದೆ. ವಿಚಾರಣೆಗೆ ಒಳಪಡಿಸಿದಾಗ ಕೈದಿಯಿಂದ ಮುಂಗಡವಾಗಿ 10 ಸಾವಿರ ರೂಪಾಯಿ ಪಡೆದು ಮೊಬೈಲ್ ಖರೀದಿಸಿಕೊಡಲು ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ.
