ಬೆಂಗಳೂರು: ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗುವಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಸಲಹೆ ಒಪ್ಪುತ್ತೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಎಸ್.ಸಿ. ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಾಜಿ ಸಚಿವ ಮತ್ತು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಸಲಹೆಯನ್ನು ಪರಮೇಶ್ವರ್ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ.
ಕ್ಷೇತ್ರ ಮರುವಿಂಗಡಣೆಯ ಬಳಿಕ ನಾನು ಪ್ರತಿನಿಧಿಸುತ್ತಿದ್ದ ಮಧುಗಿರಿ ಕ್ಷೇತ್ರದಲ್ಲಿ ರಾಜಣ್ಣ ಅವಕಾಶ ಪಡೆದರು. ಈಗ ನನಗೂ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ನಾನು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಮೀಸಲಾತಿ ಇರುವ ಕ್ಷೇತ್ರದಲ್ಲಿ ಮತ್ತೊಬ್ಬರಿಗೆ ಅವಕಾಶ ಸಿಗುತ್ತದೆ ಎನ್ನುವ ರಾಜಣ್ಣನವರ ಸಲಹೆ ನ್ಯಾಯೋಚಿತವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ರಾಜಣ್ಣ ಅವರು ಎಸ್.ಟಿ. ಸಮುದಾಯಕ್ಕೆ ಸೇರಿದ್ದರೂ ಸಾಮಾನ್ಯ ಕ್ಷೇತ್ರವಾದ ಮಧುಗಿರಿಯಿಂದ ಗೆದ್ದು ಶಾಸಕರಾಗಿದ್ದಾರೆ. ನಾನು ಮತ್ತೊಂದು ಸಾಮಾನ್ಯ ಕ್ಷೇತ್ರ ಗೆದ್ದರೆ ಎಸ್ಸಿ ಸೀಟುಗಳು ಜಾಸ್ತಿ ಆಗುತ್ತವೆ ಎನ್ನುವ ಸದುದ್ದೇಶ ರಾಜಣ್ಣ ಅವರದ್ದಾಗಿದೆ. 1984 ರಲ್ಲಿ ಕೆ.ಹೆಚ್. ರಂಗನಾಥ್ ಚಿತ್ರದುರ್ಗ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಜಣ್ಣ ಅವರು ಸಾಮಾನ್ಯ ಕ್ಷೇತ್ರ ಮಧುಗಿರಿ ಆಯ್ಕೆ ಮಾಡಿಕೊಂಡಿದ್ದಾರೆ. ಹಿಂದೆ ನಾನು ಮಧುಗಿರಿಯಿಂದ ಸ್ಪರ್ಧಿಸುತ್ತಿದ್ದೆ. ಅದು ಸಾಮಾನ್ಯ ಕ್ಷೇತ್ರವಾದಾಗ ಮೀಸಲು ಕ್ಷೇತ್ರ ಕೊರಟಗೆರೆಯಲ್ಲಿ ಸ್ಪರ್ಧಿಸಿದೆ. ಈಗ ಮಧುಗಿರಿಗೆ ವಾಪಸ್ ಹೋಗಲು ಅವಕಾಶವಿದೆ ಎಂದು ಹೇಳಿದ್ದಾರೆ.
