ಹಾವೇರಿ: ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.
ಚಂದ್ರಶೇಖರ ಕೋಡಿಹಳ್ಳಿ(75), ಘನಿಸಾಬ್(75), ಭರತ್(22) ಮೃತಪಟ್ಟವರು ಎಂದು ಹೇಳಲಾಗಿದೆ. ಇಬ್ಬರು ನಿನ್ನೆ ಮೃತಪಟ್ಟಿದ್ದು, ಇಂದು ಭರತ್ ಕೊನೆಯುಸಿರೆಳೆದಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿಯಲ್ಲಿ ನಡೆದ ಹೋರಿ ಹಬ್ಬ ನೋಡಲು ಹೋಗಿದ್ದ ವೇಳೆಯಲ್ಲಿ ಹೋರಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಭರತ್ ಮೃತಪಟ್ಟಿದ್ದಾರೆ.
ನಿನ್ನೆ ದಾನೇಶ್ವರಿ ನಗರದ ನಿವಾಸಿಯಾಗಿರುವ ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ್ ಅವರು ಮನೆಗೆ ಹೊರಟಿದ್ದ ವೇಳೆ ಹಿಂದಿನಿಂದ ಬಂದ ಹೋರಿ ತಿವಿದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದೇವಿಹೊಸೂರು ಗ್ರಾಮದಲ್ಲಿ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ್ ಅವರಿಗೆ ಸ್ಪರ್ಧೆಯಲ್ಲಿದ್ದ ಹೋರಿ ಮನೆಗೆ ನುಗ್ಗಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.