ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ ಹೆಚ್ಚುತ್ತಿದ್ದು, ಲಂಚಗುಳಿತನ ಹಾಗೂ ಅನೇಕ ವರ್ಷಗಳಿಂದ ಒಂದೆಡೆ ಬೀಡುಬಿಟ್ಟಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ತುಂಗಭದ್ರಾ ನದಿ, ಹಿರೇಹಳ್ಳದಲ್ಲಿ ಮರಳು ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ. ಬೂದಗುಂಪಾ, ಕೆರೆಹಳ್ಳಿ, ಬಂಡಿ ಹರ್ಲಾಪುರ ಭಾಗಗಳಲ್ಲಿ ಅಕ್ರಮ ಗ್ರ್ಯಾನೈಟ್ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ದೂರು ದಾಖಲಾದ ಬೆನ್ನಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆದು ವರದಿ ಸಲ್ಲಿಸಲಾಗಿದೆ.
ಬೆಣೆಕೆರೆಯಲ್ಲಿ ಹೂಳು ತೆರವು ಮಾಡಲಾಗಿದೆ. ತೆರವು ಮಾಡಿರುವ ಹೂಳು ಮಾರಾಟ ಮಾಡಿ ರಾಜಧನ ಪಾವತಿಗೆ ಸೂಚಿಸಲಾಗಿದೆ ಬಳಿಕ ಆದೇಶ ಮಾರ್ಪಡಿಸಿ ಹೂಳು ಮಾರಾಟ ಮಾಡದಂತೆ ಆದೇಶಿಸಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲಾಗಿದೆ ಎಂಬುದು ತನಿಖೆಯಲ್ಲಿ ದೃಢವಾಗಿದೆ.
ಒಟ್ಟಾರೆ ಅಕ್ರಮ ಗಣಿಗಾರಿಕೆ ಕುರಿತು ಬಸವರಾಜ್ ರಾಯರೆಡ್ಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸೂಕ್ತ ಕ್ರಮ ಕೈಗೊಳ್ಲುವಂತೆ ಆಗ್ರಹಿಸಿದ್ದಾರೆ. ಮರಳು ಮಾಫಿಯಾ, ಅಕ್ರಮ ಗಣಿಗಾರಿಕೆ ಹೆಚ್ಚುತ್ತಿದ್ದು, ಇಲಾಖೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜಿಲ್ಲಾದಿಅಕರಿಗಳ ಅಧ್ಯಕ್ಷತೆಯಲ್ಲಿ ತನಿಖೆಗೆ ಕಾರ್ಯಪಡೆ ರಚಿಸಬೇಕು. ಕೆಳ ಹಂತದ ಅಧಿಕಾರಿಗಳ ಮಾತಿನಂತೆ ಅಕ್ರಮಕ್ಕೆ ಸಹಕರಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಸೇರಿ ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.