ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಕ್ವಾರಂಟೈನ್ ಸೆಲ್ ಬಗ್ಗೆ ಕಾನೂನು ಸೇವೆಗಳ ಪ್ರಾಧಿಕಾರ ಕೋರ್ಟ್ ಗೆ ವರದಿ ಸಲ್ಲಿಸಿದೆ.
ಬೆಂಗಳೂರಿನ 57ನೇ ಸಿಸಿ ಹೆಚ್ ಕೋರ್ಟ್ ಗೆ ಕಾನೂನು ಸೇವೆಗಳ ಪ್ರಾಧಿಕಾರ ವರದಿ ಸಲ್ಲಿಸಿದೆ. ನಟ ದರ್ಶನ್ ಗೆ ಬೆನ್ನು ನೋವು ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೆಲ ಸೌಲಭ್ಯಗಳನ್ನು ಒದಗಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶ ನೀಡಿದರೂ ಜೈಲಧಿಕಾರಿಗಳು ಹೆಚ್ಚುವರಿ ಹಾಸಿಗೆ, ದಿಂಬು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಒದಗಿಸಿಕೊಟ್ಟಿಲ್ಲ ಎಂದು ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಇದೀಗ ಕಾನೂನು ಸೇವೆಗಳ ಪ್ರಾಧಿಕಾರ ದರ್ಶನ್ ಇರುವ ಕ್ವಾರಂಟೈನ್ ಸೆಲ್ ಗೆ ಭೇಟಿ ನೀಡಿ ಪರಿಶೀಲಿಸಿ ವರದಿಯನ್ನು ಸಲ್ಲಿಸಿದೆ. ದರ್ಶನ್ ಗೆ ಬೆನ್ನು ನೋವಿದ್ದ ಕಾರಣ ವೈದ್ಯರನ್ನು ಕರೆಸಿ ಸಲಹೆಯನ್ನೂ ಪಡೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿ ಸಲ್ಲಿಕೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ದರ್ಶನ್ ಕೂಡ ಕೋರ್ಟ್ ಗೆ ಹಾಜರಾಗಿದ್ದರು. ವರದಿ ಸ್ವೀಕರಿಸಿರುವ ನ್ಯಾಯಾಲಯ ಅರ್ಜಿ ಕುರಿತ ಆದೇಶವನ್ನು ಅಕ್ಟೋಬರ್ 29ಕ್ಕೆ ಮುಂದೂಡಿದೆ.