ಬೆಂಗಳೂರು: ರಾಜ್ಯಾದ್ಯಂತ ಸೆಪ್ಟೆಂಬರ್ 15 ರಿಂದ ನಡೆಸುತ್ತಿರುವ ತೃತೀಯ ಲಿಂಗಿಗಳ ಗಣತಿಯ ಭಾಗವಾಗಿ ತೃತೀಯ ಲಿಂಗಿಗಳ ಬಟ್ಟೆ ತೆಗೆಸಿ ಶೋಧಿಸಿ ಗುರುತು ಪತ್ತೆ ಮಾಡುವ ಸಮೀಕ್ಷಾ ವಿಧಾನಕ್ಕೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ತೃತೀಯ ಲಿಂಗಿಗಳ ಲಿಂಗ ಗುರುತು, ವೈದ್ಯಕೀಯ ಮತ್ತು ಸಾಮಾಜಿಕ ಮಾಹಿತಿ ಸಂಗ್ರಹಿಸುತ್ತಿರುವ ಸಮೀಕ್ಷೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮೈಸೂರಿನ ಬೋಗಾದಿಯ ಅನಿತಾ ಹ್ಯುಮ್ಯಾನಿಟೇರಿಯನ್ ಟ್ರಸ್ಟ್ ವತಿಯಿಂದ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠದಲ್ಲಿ ನಡೆದಿದೆ.
ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ ನಡೆಸುವ ಯಾವುದೇ ಸಮೀಕ್ಷೆಯನ್ನು ಕಡ್ಡಾಯವಾಗಿ ಗೌಪ್ಯವಾಗಿಡಬೇಕು. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ಗೌಪ್ಯತೆಯಿಂದ ಕಾಪಾಡಲಾಗುತ್ತಿದೆ ಎನ್ನುವುದರ ಬಗ್ಗೆ ಮೂರು ದಿನದಲ್ಲಿ ವಿಧಾನ ತಿಳಿಸಿ ಪ್ರಮಾಣಪತ್ರ ಸಲ್ಲಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತೃತೀಯ ಲಿಂಗಿಗಳು ಸ್ವಯಂ ಪ್ರೇರಣೆಯಿಂದ ಸಮೀಕ್ಷೆಯಲ್ಲಿ ಭಾಗವಹಿಸುವುದನ್ನು ಸರ್ಕಾರ ಮತ್ತು ಸಂಬಂಧಿಕರು ಖಾತರಿಪಡಿಸಬೇಕು. ಯಾರನ್ನೂ ಕರೆದು ಬಟ್ಟೆ ತೆಗೆಸಿ ಶೋಧಿಸಿ ಗುರುತು ಪತ್ತೆ ಮಾಡಿ ಸಮೀಕ್ಷೆ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ತೃತಿಯ ಲಿಂಗಿಗಳ ಗುರುತು ಪತ್ತೆಗೆ ಬಲವಂತ ಮಾಡುವಂತಿಲ್ಲ. ಆಸ್ಪತ್ರೆಗೆ ಹೋಗಿ ಬಟ್ಟೆ ತೆಗೆಸಿ ಗುರುತು ಪತ್ತೆ ಮಾಡುವ ವಿಧಾನ ಪಾಲಿಸುವಂತೆ ಸೂಚಿಸಲಾಗುತ್ತಿದೆಯೇ? ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಕಾಯ್ದೆ ಇದೆ. ಆದರೆ ಈ ಸಮೀಕ್ಷೆ ನಡೆಸಲು ಯಾವುದೇ ಕಾನೂನು ಇಲ್ಲ. ಅದನ್ನು ಸರ್ಕಾರ ಮಾಡಬಾರದಲ್ಲವೇ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ ಸಮೀಕ್ಷಾ ವಿಧಾನಕ್ಕೆ ತಡೆ ನೀಡಿದೆ.
ಅಲ್ಲದೆ ಈ ಕುರಿತಾಗಿ ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ತೃತೀಯ ಲಿಂಗಿಗಳ ರಾಷ್ಟ್ರೀಯ ಮಂಡಳಿ ಮತ್ತು ಜನಗಣತಿ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.