ಸಾಮಾನ್ಯ ಭಕ್ತರ ಕಷ್ಟ, ಅವಶ್ಯಕತೆ ತಿಳಿಯಲು ಧರ್ಮ ದರ್ಶನದ ಸರತಿ ಸಾಲಿನಲ್ಲಿ ಸಾಗಿ ಹಾಸನಾಂಬ ದೇವಿ ದರ್ಶನ ಪಡೆದ ಜಿಲ್ಲಾಧಿಕಾರಿ

ಹಾಸನ: ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಇಂದು ಧರ್ಮ ದರ್ಶನದ ಸರತಿ ಸಾಲಿನಲ್ಲಿ ಸಾಗಿ ಶ್ರೀ ಹಾಸನಾಂಬ ದೇವಿ ದರ್ಶನ ಪಡೆದರು.

ಸರತಿ ಸಾಲಿನಲ್ಲಿ ಸಾಗುತ್ತಿದ್ದ ಜಿಲ್ಲಾಧಿಕಾರಿಗಳು ಕೆಲವು ಕಡೆಗಳಲ್ಲಿ ಕಬ್ಬಿಣದ ರಾಡುಗಳು ಕಾಲಿಗೆ ತಗಲುತ್ತಿದುದನ್ನು ಗಮನಿಸಿ ಅವುಗಳಿಗೆ ಬಟ್ಟೆ ಕಟ್ಟಿ ಸರಿಪಡಿಸಲು ಸೂಚಿಸಿರಲ್ಲದೆ, ಸ್ಥಳದಲ್ಲಿಯೇ ಸರಿಪಡಿಸಿದರು. ಸಾರ್ವಜನಿಕರು ತಿಂಡಿ ತಿನಿಸುಗಳನ್ನು ತಿಂದು ಅಲ್ಲಲ್ಲಿಯೇ ಹಾಕಿದ್ದ ಖಾಲಿ ಪ್ಲಾಸ್ಟಿಕ್ ಕವರ್‌ಗಳು, ಕುಡಿಯುವ ನೀರಿನ ಬಾಟಲ್ ಮತ್ತು ಹಣ್ಣಿನ ಸಿಪ್ಪೆಯನ್ನು ಸ್ವಚ್ಛಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರತಿ ಸಾಲಿನಲ್ಲಿ ಸಾಗುತ್ತಿದ್ದ ಭಕ್ತಾದಿಗಳು ಈ ಬಾರಿ ದೇವಿ ದರ್ಶನಕ್ಕೆ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದುದು ಕಂಡು ಬಂದಿತು.

ದೇವಿ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆ.10.30 ಗಂಟೆಗೆ ಕುಟುಂಬ ಸಮೇತರಾಗಿ, ವಿವಿಧ ಹಿರಿಯ ಅಧಿಕಾರಿಗಳ ಜೊತೆಗೆ ಧರ್ಮ ದರ್ಶನವನ್ನು ಆರಂಭಿಸಿದೆವು. ಆ ಸಂದರ್ಭದಲ್ಲಿ ಮುಖ್ಯವಾಗಿ ಕಂಡು ಬಂದಂತಹ ನೂನ್ಯತೆಗಳೆಂದರೆ ಬ್ಯಾರಿಕೇಡ್ ಕಂಬಿಗಳು ಕಾಲಿಗೆ ತಾಗುತ್ತಿತ್ತು, ಈ ಹಿಂದೆ ಅದನ್ನು ಸರಿಪಡಿಸಲು ಪ್ರಯತ್ನ ಮಾಡಲಾಗಿತ್ತು. ಆದರೂ ಕೆಲವು ಕಡೆ ಕಬ್ಬಿಣದ ರಾಡಿಗೆ ಸುತ್ತಿದ್ದ ಬಟ್ಟೆ ಕಳಚಿಹೋಗಿ ಕಾಲಿಗೆ ತಾಕುತ್ತಿರುವುದನ್ನು ಗಮನಿಸಿ ಸರಿಪಡಿಸಲಾಯಿತು ಎಂದು ತಿಳಿಸಿದರು.

ಮಹಿಳಾ ಭಕ್ತಾದಿಗಳು ಅದರಲ್ಲೂ 65 ವರ್ಷ 72 ವರ್ಷದವರು ಮಂಡಿ ನೋವು ಇನ್ನಿತರ ಸಮಸ್ಯೆಗಳಿವೆ. ಕಂಬಿಯನ್ನು ಸುತ್ತು ಹಾಕಿಕೊಂಡು ಹೋಗಲು ಸಾಧ್ಯವಿಲ್ಲ. ಹಾಗಾಗಿ ನಮಗಾಗಿ ಪ್ರತ್ಯೇಕ ಸರತಿ ಸಾಲನ್ನು ಮಾಡಿ ಎಂದು ಕೇಳಿಕೊಂಡರು. ನಿಜವಾಗಲೂ ಧರ್ಮದರ್ಶನದ ಸಾಲಿನಲ್ಲಿ ನಾವು ಬಂದಿದ್ದು ಸಾರ್ಥಕವಾಯಿತು ಎಂದೆನಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇವಿ ದರ್ಶನದ ಸಂದರ್ಭದಲ್ಲಿ ತಾವು ಜಿಲ್ಲಾಧಿಕಾರಿ ಎನ್ನುವುದನ್ನು ತಿಳಿಯದೆ ನಮ್ಮನ್ನು ಸಹ ಮುಂದೆ ತಳ್ಳಿದರು. ನಮಗೂ ಒಂದು ಸೆಕೆಂಡ್ ದರ್ಶನ ದೊರೆಯಿತು. 2-3 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆಯುವವರಿಗೆ ಇದರಿಂದ ಸ್ವಲ್ಪ ಅಸಮಾಧಾನ ಉಂಟಾಗುತ್ತದೆ ಎಂಬುದು ಅರಿವಾಯಿತು. ಈಗಾಗಲೇ ಸಚಿವರು ಕೂಡಾ ಕನಿಷ್ಠ 5 ಸೆಕೆಂಡಾದರೂ ದರ್ಶನಕ್ಕೆ ಸಮಯವನ್ನು ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ಮಹಿಳೆಯರಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ನಾವು ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಬರುತ್ತಿರುವ ಸಂದರ್ಭದಲ್ಲಿ ಬಾಗಿಲನ್ನು ಮುಚ್ಚುವ ಸಾಧ್ಯತೆಗಳು ಹೆಚ್ಚಿದ್ದವು ಎಂದು ಮಾಹಿತಿ ದೊರೆಯಿತು, ಅಧಿಕಾರಿಗಳು ಸರತಿ ಸಾಲು ಮೊಟಕುಗೊಳಿಸಿ ಬಂದು ದರ್ಶನ ಪಡೆಯಿರಿ ಎಂದು ಸಲಹೆ ನೀಡಿದರು. ಆದರೆ ನಾನು ದರ್ಶನ ದೊರೆತರೂ, ದೊರೆಯದಿದ್ದರೂ ಇದೇ ಸಾಲಿನಲ್ಲಿ ಮುಂದುವರೆದು ದರ್ಶನ ಮಾಡಿಯೇ ಹೊರಡುತ್ತೇನೆ ಎಂದು ನಿರ್ಧಾರ ಮಾಡಿದ್ದೆ. ಹೇಗೋ ಎರಡು ಗಂಟೆಯೊಳಗೆ ದರ್ಶನವಾಯಿತು ಎಂದು ತಿಳಿಸಿದರು.

ಸಾಮಾನ್ಯ ಭಕ್ತರ ಕಷ್ಟಗಳು ಅವರ ಅವಶ್ಯಕತೆಗಳು ಏನು ಎಂದು ತಿಳಿಯಬೇಕೆಂದರೆ ಅವರ ಜೊತೆಯಲ್ಲಿ ನಿಂತಾಗ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read