ಕಾರವಾರ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕರಿಂದಲೇ ಮತ್ತೆ ಅಸಮಾಧಾನ ವ್ಯಕ್ತವಾಗಿದೆ. ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ನಾನು ಸಿಎಂ ಆಗಿದ್ದರೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿರಲಿಲ್ಲ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ವೇಗ ತಗ್ಗಿದೆ ಎಂದು ಹೇಳಿದ್ದಾರೆ.
ದಾಂಡೇಲಿಯಲ್ಲಿ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಹೊರೆಯಾಗಿದೆ. ಜನರಿಗೆ ಅನುಕೂಲವಾಗಿರುವುದು ಒಂದುಕಡೆಯಾದರೆ, ಇನ್ನೊಂದೆಡೆ ಸರ್ಕಾರ ನಡೆಸಲು ಕಷ್ಟವಾಗಿದೆ ಎಂದಿದ್ದಾರೆ.
ಸರ್ಕಾರದ ಈ ಯೋಜನೆಗಳನ್ನು ಜನರಿಗೆ ತಲುಪಿಸಲು ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಅವುಗಳನ್ನು ನಿಭಾಯಿಸುವುದೇ ದೊಡ್ದ ಕೆಲಸ. ಹೀಗಾಗಿ ರಾಅಜ್ಯದಲ್ಲಿ ಅಭಿವೃದ್ಧಿ ವೇಗ ಕುಂಟಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ರಾಜ್ಯದಲ್ಲಿ 5 ಕೆಜಿ ಅಕ್ಕಿ ಬದಲಿಗೆ ಸರ್ಕಾರದಿಂದ ಇಂದಿರಾ ಕಿಟ್ ಕೊಡುವ ವಿಚಾರವಾಗಿ ಮಾತನಾಡಿದ ದೇಶಪಾಂಡೆ, ಮುಖ್ಯಮಂತ್ರಿಗಳು ಇಂದಿರಾ ಕಿಟ್ ಕೊಡ್ತಾರೋ, ತೆಂಗಿನ ಕಾಯಿ ಕೊಡ್ತಾರೋ ನಮಗೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.