ಚಿಕ್ಕಬಳ್ಳಾಪುರ: ಪ್ರೀತಿಸಿದ ಪ್ರೇಮಿಗಳು ಪರಾರಿಯಾಗಿ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡ ಯುವತಿಯ ಕುಟುಂಬದವರು ಯುವಕನ ತಾಯಿಗೆ ಬೆಂಕಿ ಹಚ್ಚಿ ಕೊಲೆಗೈಯಲು ಯತ್ನಿಸಿದ ಘಟನೆ ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿಯಲ್ಲಿ ನಡೆದಿದೆ.
ಮಗಳನ್ನು ಕರೆದುಕೊಂಡು ಹೋದ ಆಕ್ರೋಶದಿಂದ ಯುವತಿ ಕಡೆಯವರು ಯುವಕನ ತಾಯಿಗೆ ಬೆಂಕಿ ಹಚ್ಚಿದ್ದಾರೆ. 62 ವರ್ಷದ ಬಯಮ್ಮ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಗಟಪಲ್ಲಿಯ ಅಂಬರೀಶ್ ಮತ್ತು ಸಿಂಗಪ್ಪಗಾರಿಪಲ್ಲಿಯ ಪ್ರತಿಭಾ ಪ್ರೀತಿಸಿದ್ದು, ಮದುವೆಗೆ ಯುವತಿ ಕುಟುಂಬದವರು ವಿರೋಧಿಸಿದ್ದರು. ಈ ನಡುವೆ ಪ್ರೇಮಿಗಳು ಪರಾರಿಯಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ವಿಷಯ ತಿಳಿದ ಯುವತಿ ಮನೆಯವರು ಯುವಕನ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಮನೆಯಲ್ಲಿದ್ದ ಪರಿಕರಗಳನ್ನು ಸುಟ್ಟು ಹಾಕಿದ್ದು ಬಯಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾತಪಾಳ್ಯ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.