ಬೆಂಗಳೂರು : ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಎಂಬಂತೆ ಒಂದು ದಿನ ಋತುಚಕ್ರ ರಜೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಹೌದು. ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಖಾಸಗಿ ಕಂಪನಿ, ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಋತು ಚಕ್ರ ರಜೆ ನೀತಿ 2025 ಜಾರಿಗೆ ತರುವ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ, ಖಾಸಗಿ ಕಂಪನಿ ಸೇರಿದಂತೆ ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ನೀಡಲು ತೀರ್ಮಾನ ಕೈಗೊಂಡಿದ್ದಾರೆ.
ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಋತುಚಕ್ರ ರಜೆ ನೀಡುವ ಬಗ್ಗೆ 18 ಸದಸ್ಯರ ಸಮಿತಿ ಇತ್ತೀಚೆಗೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಋತುಚಕ್ರದ ಅವಧಿಯಲ್ಲಿ ಮಹಿಳೆಯರಲ್ಲಿ ಆಗುವ ಶಾರೀರಿಕ ಬದಲಾವಣೆ, ಸಂಕಷ್ಟ, ಸವಾಲು, ವಿಶ್ರಾಂತಿ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದು, ಈ ಹಿನ್ನೆಲೆಯಲ್ಲಿ ಬಿಹಾರ, ಕೇರಳ, ಒಡಿಶಾ ರೀತಿ ರಾಜ್ಯದಲ್ಲಿಯೂ ರಾಜ್ಯ ನೀತಿ ಜಾರಿಗೆ ಒಲವು ವ್ಯಕ್ತವಾಗಿತ್ತು.