ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದ ಜಾಲಿವುಡ್ ಸ್ಟುಡಿಯೋ ತೆರೆಯಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ‘ಬಿಗ್ ಬಾಸ್’ ಸೀಸನ್ 12ರ 17 ಸ್ಪರ್ಧಿಗಳನ್ನು ಈಗಲ್ಟನ್ ರೆಸಾರ್ಟ್ ನಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುವುದು.
ನಿನ್ನೆ ರಾತ್ರಿಯಿಂದಲೂ ಸ್ಪರ್ಧಿಗಳು ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿದ್ದಾರೆ. ಇಂದು ಮಧ್ಯಾಹ್ನವೇ ರೆಸಾರ್ಟ್ ನಿಂದ ಚೆಕ್ ಔಟ್ ಮಾಡಬೇಕಿತ್ತು, ಸಂಜೆಯವರೆಗೂ ‘ಬಿಗ್ ಬಾಸ್’ ತಂಡ ಕಾಲಾವಕಾಶ ಕೇಳಿದ್ದು, ಜಾಲಿವುಡ್ ಸ್ಟುಡಿಯೋ ತೆರೆಯಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲಾಗುತ್ತದೆ.
ಇನ್ನು ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ‘ಬಿಗ್ ಬಾಸ್’ ಗರಂ ಆಗಿದ್ದು, ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಮತ್ತು ಇತರೆ ವಿಚಾರಗಳನ್ನು ಗೌಪ್ಯವಾಗಿಟ್ಟಿದ್ದ ಸ್ಟುಡಿಯೋ ಆಡಳಿತ ಮಂಡಳಿ ಎಲ್ಲಾ ಅನುಮತಿ ಇದೆ ಎಂದು ಸುಳ್ಳು ಹೇಳಿದೆ. ಇದರಿಂದ ‘ಬಿಗ್ ಬಾಸ್’ ಚಿತ್ರೀಕರಣ ಸ್ಥಗಿತವಾಗಿ ಶೋಗೆ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ‘ಬಿಗ್ ಬಾಸ್’ ಆಡಳಿತ ಮಂಡಳಿ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.