ಬೆಂಗಳೂರು: ಪತ್ನಿಗೆ ವಿಚ್ಛೇದನ ನೀಡಿದರೂ ಪುತ್ರಿಯ ಪೋಷಣೆ ತಂದೆಯ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಹೇಳಿದೆ. ವಿಚ್ಛೇದನ ಮಂಜೂರಾಗಿದೆ ಮತ್ತು ವಿಚ್ಛೇದಿತ ಪತ್ನಿ ಉದ್ಯೋಗ ಮಾಡಿ ವೇತನ ಪಡೆಯುತ್ತಿದ್ದಾರೆ ಎನ್ನುವ ಕಾರಣದಿಂದ ತನ್ನ ಅಪ್ರಾಪ್ತ ಮಗುವಿಗೆ ಜೀವನಾಂಶ ಪಾವತಿಸುವ ಶಾಸನಬದ್ಧ ಕರ್ತವ್ಯದಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಮೂಲಕ ಅಪ್ರಾಪ್ತ ಪುತ್ರಿಗೆ ನೀಡಲು ನಿಗದಿಪಡಿಸಲಾದ ಮಾಸಿಕ 5,000 ರೂ. ಜೀವನಾಂಶ ಮೊತ್ತವನ್ನು ಕಡಿತಗೊಳಿಸಲು ಮನವಿ ಮಾಡಿದ್ದ ತಂದೆಗೆ ಹೈಕೋರ್ಟ್ ಚಾಟಿ ಬೀಸಿದೆ. ಅಪ್ರಾಪ್ತ ಪುತ್ರಿಗೆ ಮಾಸಿಕ 5,000 ರೂ. ಜೀವನ ವೆಚ್ಚ ನೀಡಲು 2014ರ ಸೆಪ್ಟೆಂಬರ್ 30ರಂದು ಚಾಮರಾಜನಗರ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಹೊರಟಿಸಿದ ಆದೇಶ ಮತ್ತು ಅದನ್ನು ಕಾಯಂಗೊಳಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2025ರ ಮಾರ್ಚ್ 25ರಂದು ಹೊರಡಿಸಿದ ಆದೇಶ ರದ್ದು ಪಡಿಸುವಂತೆ ಕೋರಿ ಮೈಸೂರು ಜಿಲ್ಲೆ ಟಿ. ನರಸೀಪುರದ ನಿವಾಸಿ ಅರುಣ್ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮೊಗದಂ ಅವರ ಪೀಠದಿಂದ ಈ ಆದೇಶ ನೀಡಲಾಗಿದೆ.
ವಿಚ್ಛೇದಿತ ಪತ್ನಿ ಉದ್ಯೋಗದಲ್ಲಿದ್ದು ಮಾಸಿಕ 61,000 ರೂ. ವೇತನ ಪಡೆಯುತ್ತಿದ್ದಾರೆ. ವಿವಾಹ ಅಸಿಂಧುವಾಗಿ ವಿಚ್ಛೇದನ ಮಂಜೂರಾಗಿದ್ದರೂ, ಪತ್ನಿ ಮಗುವನ್ನು ಆರೈಕೆ ಮಾಡಲು ಆರ್ಥಿಕ ಸಾಮರ್ಥ್ಯ ಹೊಂದಿದ್ದರೂ ವಿಚಾರಣಾ ನ್ಯಾಯಾಲಯಗಳು ಮಗುವಿನ ಜೀವನಾಂಶಕ್ಕೆ ಮಾಸಿಕ 5,000 ರೂ. ನೀಡಬೇಕೆಂದು ಹೇಳಿವೆ. ಇದು ನ್ಯಾಯ ಸಮ್ಮತವಾಗಿಲ್ಲ. ಜೀವನಾಂಶ ಮೊತ್ತ ಕಡಿತಗೊಳಿಸುವ ಅಗತ್ಯವಿದೆ ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಅವರ ವಾದವನ್ನು ಒಪ್ಪದ ಹೈಕೋರ್ಟ್, ವಿಚ್ಛೇದಿತ ಪತ್ನಿ ಆದಾಯ ಮೂಲ ಹೊಂದಿದ್ದರೂ ಮಗಳ ಜೀವನ ನಿರ್ವಹಣೆ ಕಾನೂನು ಬದ್ಧ ಹೊಣೆಗಾರಿಕೆಯಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.