ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಲಗ್ಗೆರೆಯ ಮುನೇಶ್ವರ ಬ್ಲಾಕ್ ನಲ್ಲಿ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆಯ ರೂನಿನಲ್ಲಿಯೇ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ರಕ್ಷಿತಾ (26) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ನಾಲ್ಕು ವರ್ಷಗಳ ಹಿಂದೆ ರಕ್ಷಿತಾ ರವೀಶ್ ಎಂಬಾತನನ್ನು ವಿವಾಹವಾಗಿದ್ದರು. ಪತಿ ರವೀಶ್ ಧನಲಕ್ಷ್ಮೀ ಬ್ಯಾಂಕ್ ಮ್ಯಾನೇಜರ್.
ರಕ್ಷಿತಾ ಹಾಗೂ ರವೀಶ್ ದಂಪತಿಗೆ 3 ವರ್ಷದ ಮಗಳಿದ್ದಾಳೆ. ರವೀಶ್ ತಮ್ಮ ಲೋಕೇಶ್ ಕೂಡ ಅದೇ ಮನೆಯಲ್ಲಿ ವಾಸವಾಗಿದ್ದ. ಕಳೆದ ಮೂರು ವರ್ಷಗಳಿಂದ ಪತಿ ರವೀಶ್ ಪತ್ನಿ ರಕ್ಷಿತಾ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದನಂತೆ. ಇದೀಗ ರಕ್ಷಿತಾ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿ ಹಾಗೂ ಮೈದುನ ಸೇರಿ ಕೊಲೆ ಮಾಡಿದ್ದಾರೆ ಎಂದು ರಕ್ಷಿತಾ ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ಮೊಮ್ಮಗಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.