ಮಡಿಕೇರಿ: ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿ ದಾಂದಲೆ ನಡೆದಿದೆ. ಬಹುಮಾನ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ವೇದಿಕೆಗೆ ನುಗ್ಗಿದ ಮಂಟಪ ಸಮಿತಿ ಸದಸ್ಯರು ರಂಪಾಟ ನಡೆಸಿದ್ದಾರೆ.
ನವರಾತ್ರಿ ಹಾಗೂ ದಸರಾ ಹಿನ್ನೆಲೆಯಲ್ಲಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ದಶಮಂಟಪಗಳ ಭವ್ಯ ಶೋಭಾಯಾತ್ರೆ ಏರ್ಪಡಿಸಲಾಗಿತ್ತು. ಬಳಿಕ ಅತ್ಯುತ್ತಮ ಮೂರು ಮಂಟಪಗಳಿಗೆ ಬಹುಮಾನ ಘೋಷಿಸಲಾಗಿತ್ತು. ಬಹುಮಾನ ವಿತರಣೆ ಕಾರ್ಯಕ್ರಮದ ವೇಳೆ ಮಂಟಪ ಸಮಿತಿ ಸದಸ್ಯರು ಗಲಾಟೆ ಮಾಡಿದ್ದಾರೆ.
ಕಾರ್ಯಕ್ರಮದ ವೇದಿಕೆಗೆ ನುಗ್ಗಿದ ಸದಸ್ಯರು, ಬಹುಮಾನ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಪ್ರತಿಭಟನಿಸಿದ್ದಾರೆ. ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ನೂಕಾಟ ತಳ್ಳಾಟ ನಡೆದು ಕೆಲ ಮಂಟಪ ಸಮಿತಿ ಸದಸ್ಯರು ವೇದಿಕೆಯಿಂದ ಕೆಳಗೆ ಉರುಳಿಬಿದ್ದ ಘಟನೆಯೂ ನಡೆದಿದೆ.
ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವೇದಿಕೆಯಲ್ಲಿದ್ದ ಸದಸ್ಯರನ್ನು ಹೊರಕಳುಹಿಸಿದ್ದು, ಪರಿಸ್ಥಿತಿ ನಿಯಂತ್ರಿಸಿದ್ದಾರೆ.