ಬೆಂಗಳೂರು: ವಾಡಿಕೆಯಂತೆ ರಾಜ್ಯದಲ್ಲಿ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಳ್ಳಬೇಕಿದ್ದ ನೈರುತ್ಯ ಮುಂಗಾರು ಅಕ್ಟೋಬರ್ 15ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಪ್ರತಿವರ್ಷ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ನೈರುತ್ಯ ಮಾನ್ಸೂನ್ ಮುಂಗಾರು ಮಾರುತಗಳು ರಾಜ್ಯದಲ್ಲಿ ಮಳೆ ಸುರಿಸುತ್ತವೆ. ಅಕ್ಟೋಬರ್ 1ರಿಂದ ವರ್ಷಾಂತ್ಯದವರೆಗೆ ಹಿಂಗಾರಿನಲ್ಲಿ ಈಶಾನ್ಯ ಮಾರುತಗಳು ಮಳೆ ತರುತ್ತವೆ. ಆದರೆ ಗಾಳಿಯ ದಿಕ್ಕಿನ ಮೇರೆಗೆ ಕೆಲವು ಬಾರಿ ನೈರುತ್ಯ ಮತ್ತು ಈಶಾನ್ಯ ಮಾನ್ಸೂನ್ ನಲ್ಲಿ ವ್ಯತ್ಯಾಸವಾಗಲಿದೆ. ಈ ವರ್ಷ ನೈರುತ್ಯ ಮಾರುತಗಳು ಅಕ್ಟೋಬರ್ 15 ರವರೆಗೆ ಮುಂದುವರೆಯಲಿದ್ದು, ನಂತರ ರಾಜ್ಯಕ್ಕೆ ಈಶಾನ್ಯ ಮಾರುತಗಳು ಪ್ರವೇಶಿಸಲಿವೆ ಎಂದು ಬೆಂಗಳೂರಿನ ಭಾರತೀಯ ಹವಮಾನ ಇಲಾಖೆ ನಿರ್ದೇಶಕರಾದ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಹಿಂಗಾರು ಮಳೆ ಸಾಮಾನ್ಯವಾಗಿರುವ ನೀರಿಕ್ಷೆ ಇದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಆಗುವ ಸಂಭವ ಇದೆ. ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದೆ ಎಂದು ಹೇಳಿದ್ದಾರೆ.
ಈ ವರ್ಷ ವಾಡಿಕೆಗಿಂತ ಮೊದಲೇ ನೈರುತ್ಯ ಮುಂಗಾರು ಆಗಮನವಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 29 ವರೆಗೆ ಸಾಮಾನ್ಯವಾಗಿ 845 ಮಿ. ಮೀ. ಮಳೆಯಾಗಬೇಕಿತ್ತು. 879 ಮಿ. ಮೀ. ಮಳೆಯಾಗಿದ್ದು, ವಾರ್ಷಿಕ ವಾಡಿಕೆಯ ಮಳೆಯ ಪ್ರಮಾಣ ರಾಜ್ಯದಲ್ಲಿ 964 ಮಿ.ಮೀ. ಆಗಿದ್ದು 1166 ಮಿ. ಮೀ. ಮಳೆಯಾಗಿದೆ.
ಇನ್ನು ಮುಂದಿನ ಒಂದು ವಾರ ಕರಾವಳಿಯ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹೇಳಲಾಗಿದೆ.