HomeLatest News13 ಸಾವಿರ ರಸ್ತೆಗುಂಡಿ ಮುಚ್ಚಲಾಗಿದೆ: ವಾರ್ಡ್ ಮಟ್ಟದ ರಸ್ತೆ ಸುಧಾರಣೆಗೆ ಶಾಸಕರಿಗೆ ₹1100 ಕೋಟಿ ಹಂಚಲು...

13 ಸಾವಿರ ರಸ್ತೆಗುಂಡಿ ಮುಚ್ಚಲಾಗಿದೆ: ವಾರ್ಡ್ ಮಟ್ಟದ ರಸ್ತೆ ಸುಧಾರಣೆಗೆ ಶಾಸಕರಿಗೆ ₹1100 ಕೋಟಿ ಹಂಚಲು ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಇದುವರೆಗೂ 13,000 ಗುಂಡಿಗಳನ್ನು ಮುಚ್ಚಲಾಗಿದೆ. ಪ್ರತಿ ಗುಂಡಿ ಮುಚ್ಚಿರುವುದಕ್ಕೆ ಫೋಟೋ, ವಿಡಿಯೋ ದಾಖಲೆ ಮಾಡಿಸಲಾಗಿದೆ. ಮಾಧ್ಯಮಗಳು ಕೂಡ ಪರಿಶೀಲನೆ ಮಾಡಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ನಾಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಟಿ ರೌಂಡ್ಸ್ ನಡೆಸಿ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಿ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ 550 ಕಿ.ಮೀ ಉದ್ದದ ಮುಖ್ಯರಸ್ತೆಗಳ ಅಭಿವೃದ್ಧಿಗೆ ₹1100 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಮುಖ್ಯರಸ್ತೆಗಳ ಜಂಕ್ಷನ್ ನಲ್ಲಿ ಕಾಂಕ್ರೀಟ್ ಹಾಕಲು 26 ದಿನಗಳ ಅಗತ್ಯವಿದ್ದು, ಟ್ರಾಫಿಕ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ನಾನು ಬೆಂಗಳೂರು ರಸ್ತೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ. ಇನ್ನು ರಸ್ತೆಗುಂಡಿ ಮುಚ್ಚುವುದಕ್ಕಾಗಿ ₹750 ಕೋಟಿ ನೀಡುವುದಾಗಿ ಸಿಎಂ ಹೇಳಿದ್ದಾರೆ ಎಂದರು.

ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲು ₹1100 ಕೋಟಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಅನುದಾನವನ್ನು ರಸ್ತೆಗಳ ಸುಧಾರಣೆಗೆ ಬಳಸಲು ಸೂಚನೆ ನೀಡಲಾಗಿದೆ.

ದೇಶದಲ್ಲಿ ಯಾವುದೇ ನಗರದ ಮಂತ್ರಿ ರಸ್ತೆಯಲ್ಲಿ ಗುಂಡಿ ಕಂಡರೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿರಲಿಲ್ಲ. ಆದರೆ ನಾನು ಇದಕ್ಕಾಗಿ ಪ್ರತ್ಯೇಕ ಆಪ್ ಸಿದ್ಧಪಡಿಸಿ, ಪೋಲೀಸರ ಸಹಕಾರದಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ಇಂತಹ ಪ್ರಯತ್ನ ನಡೆದಿರುವುದು ಕರ್ನಾಟಕದಲ್ಲಿ ಮಾತ್ರ. ಬೆಂಗಳೂರು ಜಾಗತಿಕ ನಗರ ಹೀಗಾಗಿ ಎಲ್ಲರೂ ಬೆಂಗಳೂರು ರಸ್ತೆಗುಂಡಿಗಳ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿಗಳ ಮನೆ ರಸ್ತೆಯಲ್ಲಿ ಗುಂಡಿ ಇಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬೇಕಿದ್ದರೆ ನನ್ನ ಜೊತೆ ಅವರು ಬರಲಿ ತೋರಿಸುತ್ತೇನೆ. ದೆಹಲಿಯಲ್ಲಿರುವ ರಸ್ತೆಗುಂಡಿ ತೋರಿಸುತ್ತೇನೆ. ಕರ್ನಾಟಕ ಭಾವನದಿಂದ ಹೋಗುವಾಗ ನೋಡಿದ್ದೇನೆ. ಎಲ್ಲಾ ಕಡೆ ಇದೇ ಪರಿಸ್ಥಿತಿ ಇದೆ. ಅವರ ತಪ್ಪು ಎಂದು ಹೇಳುವುದಿಲ್ಲ. ಅವರು ಯಾವಾಗ ಬರುತ್ತಾರೆ ಹೇಳಿ, ರಾಜ್ಯದಿಂದ ಒಂದು ನಿಯೋಗ ಹೋಗೋಣ. ಹಾಗೆ ಯಾರಾದರೂ ಕೇಂದ್ರ ಸರ್ಕಾರದಿಂದ ಹಣ ಕೊಡಿಸಿದರೆ ತರೋಣ ಎಂದರು.

ಕಸದ ಪರಿಸ್ಥಿತಿ ವಿಚಾರವಾಗಿ ಕಸದ ಸಮಸ್ಯೆಯೂ ಇದೆ. ಇಂದು ಕಾಂಗ್ರೆಸ್ ಕಚೇರಿಗೆ ಹೋಗುವಾಗ ಜಯಮಹಲ್ ರಸ್ತೆಯಲ್ಲಿ ಯಾರೋ ಒಂದು ಲೋಡ್ ಕಸ ಸುರಿದಿದ್ದಾರೆ. ನಿನ್ನೆ ರಾತ್ರಿ ಇರಲಿಲ್ಲ. ರಾತ್ರೊರಾತ್ರಿ ಬಂದು ಸುರಿದಿದ್ದಾರೆ. ಈ ಕಸ ಸುರಿದವರು ಯಾರು ಎಂದು ಸಿಸಿಟಿವಿಯಲ್ಲಿ ಪತ್ತೆ ಮಾಡಿ ಅವನ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಅವನ ಗಾಡಿ ಸೀಜ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular