ಬೆಂಗಳೂರು: ವಿಚ್ಛೇದಿತ ಮಹಿಳೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ವಂಚಿಸಿದ ಆರೋಪದಡಿ ಕ್ರಿಕೆಟ್ ತರಬೇತುದಾರನನ್ನು ಬೆಂಗಳೂರಿನ ಕೋಣನಕುಂಟೆ ಠಾಣೆ ಪೋಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಎ.ಬಿ. ಮ್ಯಾಥ್ಯೂ(36) ಬಂಧಿತ ಆರೋಪಿ.
35 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಕೇರಳಕ್ಕೆ ಪರಾರಿಯಾಗಿದ್ದ. ಪೊಲೀಸರ ತಂಡಗಳು ಕೇರಳಕ್ಕೆ ತೆರಳಿ ಹುಡುಕಾಟ ನಡೆಸಿದ್ದು, ಆರೋಪಿ ಮತ್ತೆ ಬೆಂಗಳೂರಿಗೆ ಬಂದು ತಲೆಮರಿಸಿಕೊಂಡ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಎ.ಬಿ. ಮ್ಯಾಥ್ಯೂ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಸೆ. 22ರಂದು ಸಂತ್ರಸ್ತ ಮಹಿಳೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಮಹಿಳಾ ಆಯೋಗದ ಅಧ್ಯಕ್ಷರು ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರು. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಬನ್ನೇರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದ ಮ್ಯಾಥ್ಯೂ ಕೆಲ ವರ್ಷಗಳಿಂದ ಕ್ರಿಕೆಟ್ ಅಕಾಡೆಮಿ ನಡೆಸುತ್ತಿದ್ದಾನೆ. ವಿಚ್ಛೇದಿತ ಮಹಿಳೆ ತನ್ನ ಪುತ್ರಿಯನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ದು, ಈ ವೇಳೆ ಆರೋಪಿ ಪರಿಚಯವಾಗಿದ್ದ. ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ವಂಚಿಸಿದ್ದ. ಇದೇ ರೀತಿ ಹಲವು ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿ ಖಾಸಗಿ ಕ್ಷಣದ ಫೋಟೋ, ವಿಡಿಯೋಗಳು ಆತನ ಮೊಬೈಲ್ ನಲ್ಲಿ ಪತ್ತೆಯಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.