ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು, ಕೆಜಿಗೆ ಕೇವಲ ಒಂದು ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರಿಗೆ ಭಾರಿ ನಷ್ಟ ಉಂಟಾಗಿ ತೊಂದರೆಯಾಗಿದೆ.
50 ಕೆಜಿ ಚೀಲದ ಈರುಳ್ಳಿಗೆ 800 ರೂ.ಗಿಂತ ಹೆಚ್ಚು ಖರ್ಚು ಮಾಡಿ ಬೆಳೆದ ರೈತರಿಗೆ ಕೇವಲ 50 ರೂ. ಮಾತ್ರ ಸಿಗುತ್ತಿದೆ. ಮಧ್ಯ ಕರ್ನಾಟಕ ಪ್ರದೇಶದಲ್ಲಿ ಈರುಳ್ಳಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಬಾರಿ ಉತ್ತಮ ಫಸಲಿನಿಂದ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ದಿಢೀರ್ ಬೆಲೆ ಪಾತಾಳಕ್ಕೆ ಕುಸಿತವಾಗಿರುವುದರಿಂದ ಆಘಾತ ಉಂಟಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚೀಲಕ್ಕೆ 1,600 ರಿಂದ 3450 ರೂ.ವರೆಗೆ ದರ ಸಿಕ್ಕಿತ್ತು. ಈ ಬಾರಿ ಕೆಜಿಗೆ ಕೇವಲ ಒಂದರಿಂದ ಐದು ರೂಪಾಯಿಗೆ ಇಳಿದಿದೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಮಳೆಯಿಂದ ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿ ಗುಣಮಟ್ಟವೂ ಹಾಳಾಗಿದೆ. ಸ್ಥಳೀಯ ಬೆಳೆಯನ್ನು ನಿರಾಕರಿಸಿ ವರ್ತಕರು ಮಹಾರಾಷ್ಟ್ರದ ಈರುಳ್ಳಿ ಖರೀದಿಸುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.