ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮಳೆ ಅವಾಂತರದಿಂದಾಗಿ ಈವರೆಗೆ ೭ ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪ್ರವಾಹ ಹಾಗೂ ವಿದ್ಯುತ್ ಅವಘಡದಿಂದಾಗಿ 7 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತ್ತಾದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಬೆನಿಯಾಪುಕುರ್, ಕಾಲಿಕಾಪುರ್, ನೇತಾಜಿ ನಗರ, ಗರಿಯಾಹಟ್, ಏಕಬಜ್ಪುರ್, ಬೆಹಲಾ, ಹರಿದೇವಪುರ ಪ್ರದೇಶಗಳಲ್ಲಿ ಪ್ರವಾಹ ರೀತಿಯಲ್ಲಿ ಏಕಾಏಕಿ ನೀರು ನುಗ್ಗಿ ಅನಾಹುತಗಳು ಸಂಭವಿಸಿವೆ.
ಐವರು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಇಬ್ಬರು ಮಳೆ ಅವಾಂತರದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೊಲ್ಕತ್ತಾ ನಗರದಾದ್ಯಂತ ಭಾರಿ ಮಳೆಯಿಂದಾಗಿ ಸಮಸ್ಯೆ ಎದುರಾಗಿದೆ. ಮೆಟ್ರೋ ಸಂಚಾರ, ಸಬ್ ಅರ್ಬನ್ ರೈಲು ಸಂಚಾರ, ವಿಮಾನ ಹಾರಾಟದಲ್ಲಿಯೂ ವ್ಯತ್ಯಯವಾಗಿದೆ. ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿರುವ ಪರಿಣಾಮ ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿದ್ದು, ಜನರು ಪರದಾಡುವಂತಾಗಿದೆ.