ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ.) ಹಣಕಾಸು ನೀತಿ ಸಮಿತಿ ಸಭೆ ಸೆಪ್ಟೆಂಬರ್ 29 ರಂದು ಆರಂಭವಾಗಲಿದ್ದು, ಈ ಬಾರಿ ಕೂಡ ಬಡ್ಡಿದರ ಇಳಿಕೆಗೆ ಅವಕಾಶವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ವರದಿ ಸೋಮವಾರ ತಿಳಿಸಿದೆ.
ಸೆಪ್ಟೆಂಬರ್ ನಲ್ಲಿ ಹಣದುಬ್ಬರ ಇಳಿಕೆಯಾಗಲಿದೆ. ಇದು 2004ರ ಬಳಿಕ ಕನಿಷ್ಠ ಮಟ್ಟಕ್ಕೆ ಕುಸಿತವಾಗಿ ದಾಖಲೆ ಎನಿಸಲಿದೆ. ಜಿ.ಎಸ್.ಟಿ. 2.0 ಜಾರಿಯಾಗಿದ್ದು, ಭಾರತ, ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆಗೆ ಮತ್ತೆ ಜೀವ ಬಂದಿದೆ. ಈ ಎಲ್ಲಾ ಅಂಶಗಳು ಬಡ್ಡಿ ದರ ಕಡಿತಕ್ಕೆ ಬಲ ನೀಡಿವೆ ಎಂದು ವಿಶ್ಲೇಷಿಸಲಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ಹಣದುಬ್ಬರ ಇನ್ನಷ್ಟು ಇಳಿಯಬಹುದು. ಜಿ.ಎಸ್.ಟಿ. ಪರಿಷ್ಕರಣೆಯಿಂದಾಗಿ 375 ಕ್ಕೂ ಹೆಚ್ಚು ಉತ್ಪನ್ನಗಳ ಬೆಲೆ ಇಳಿಕೆಯಾಗಿದ್ದು, ಗ್ರಾಹಕ ಬೆಲೆ ಸೂಚ್ಯಂಕ ಶೇ. 1.1ಕ್ಕೆ ಸಮೀಪ ಬರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರೂಪ್ ನ ಮುಖ್ಯ ಆರ್ಥಿಕ ಸಲಹೆಗಾರರಾದ ಡಾ. ಸೌಮ್ಯ ಕಾಂತಿ ಘೋಷ್ ನಿರೀಕ್ಷಿಸಿದ್ದು, ಸೆಪ್ಟೆಂಬರ್ ನಲ್ಲಿ ಬಡ್ಡಿದರ ಕಡಿತ ಮಾಡಲು ತಾರ್ಕಿಕ ಬೆಂಬಲವಿದೆ ಎಂದು ಹೇಳಿದ್ದಾರೆ.