ತುಮಕೂರು: ತುಮಕೂರಿನಲ್ಲಿ ಹಿಂದೂ ಮಹಾ ಗಣೇಶ ವಿಸರ್ಜನೆ ಮೆರವಣಿಗೆ ನಡೆದಿದ್ದು, ಮೆರವಣಿಗೆ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದೆ ಎಂದು ಟೀಕಿಸಿದ್ದಾರೆ. ನಾನು ಒಕ್ಕಲಿಗ, ನಾನು ದಲಿತ, ನಾನು ಲಿಂಗಾಯಿತ ಯಾವುದೂ ಅಲ್ಲ, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಯತ್ನಾಳ್ ಹೇಳಿದ್ದಾರೆ.
ಕೆಲವು ಸ್ವಾಮೀಜಿಗಳು ಧರ್ಮ ಪ್ರಚಾರ ಮಾಡುವುದನ್ನು ಬಿಟ್ಟು ಇಸ್ಲಾಂ- ಲಿಂಗಾಯಿತ ಒಂದೇ ಎನ್ನುತ್ತಾರೆ. ಅಂತಹ ಸ್ವಾಮೀಜಿಗಳು ಹಿಂದೂ ಧರ್ಮವನ್ನೆಲ್ಲ ಬಿಟ್ಟಿದ್ದಾರೆ. ವೀರಶೈವ, ಲಿಂಗಾಯಿತ ಬೇರೆ ಅಂತ ಹೇಳುತ್ತಾರೆ. ನಾವೆಲ್ಲರೂ ಒಂದೇ ಆಗಿದ್ದರೆ ಮಾತ್ರ ಭಾರತ ಉಳಿಯುತ್ತದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದೆ. ಅಂಬೇಡ್ಕರ್ ಧರ್ಮಾಧಾರಿತ ಮೀಸಲಾತಿ ಕೊಡಬಾರದು ಎಂದು ಹೇಳಿದ್ದರು. ನಾವೆಲ್ಲರೂ ಒಂದಾಗಬೇಕೆಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮದ್ದೂರಿನಲ್ಲಿ ಮೊನ್ನೆ ಜನ ನನಗೆ ಪ್ರೀತಿ ವಿಶ್ವಾಸ ತೋರಿಸಿದರು. ಹಿಂದೂಗಳ ಪರವಾಗಿ ನೀವು ಮುಖ್ಯಮಂತ್ರಿ ಆಗಬೇಕೆಂದು ಹೇಳಿದರು. ನಾನು ಮುಖ್ಯಮಂತ್ರಿ ಆದರೆ ಮೊದಲ ಕೆಲಸ ಭ್ರಷ್ಟಾಚಾರ ಮುಕ್ತ ಸರ್ಕಾರ. ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಅಂದರೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲ್ಲ, ಅಲ್ಲೇ ಢಮಾರ್ ಎನಿಸುತ್ತೇವೆ ಎಂದಿದ್ದಾರೆ.