ಚಿಕ್ಕಬಳ್ಳಾಪುರ: ಇಬ್ಬರು ಪುತ್ರಿಯರ ಜೊತೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಸಾವನ್ನಪ್ಪಿದ್ದು, ಇಬ್ಬರು ಹೆಣ್ಣುಮಕ್ಕಳು ಬಚಾವ್ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಮಂಚೇನಹಳ್ಳಿ ತಾಲೂಕಿನ ಮಿಣಕನಗುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮೀ (38) ಮೃತ ಮಹಿಳೆ. ಲಕ್ಷ್ಮೀ ತನ್ನ ಇಬ್ಬರು ಪುತ್ರಿಯರಾದ 7 ವರ್ಷದ ತನು ಹಾಗೂ ಗೌತಮಿಗೆ ವಿಷಬೆರಸಿದ ಜ್ಯೂಸ್ ನೀಡಿ ಕುಡಿಯುವಂತೆ ಹೇಳಿದ್ದಳು. ಆದರೆ ಮಗಳು ತನು ಜ್ಯೂಸ್ ಬೇಡ ಎಂದು ಕುಡಿದಿರಲಿಲ್ಲ. ವಿಷಬೆರೆಸಿದ್ದ ಜ್ಯೂಸ್ ಕುಡಿದಿದ್ದ ತಾಯಿ ಲಕ್ಷ್ಮೀ ಒದ್ದಾಡುತ್ತಿರುವುದನ್ನು ಕಂಡು ತನು ಮನೆಯಿಂದ ಹೊರಬಂದು ರಸ್ತೆಯಲ್ಲಿ ಹೋಗುತ್ತಿದವರಿಗೆ ತನ್ನ ತಾಯಿಯನ್ನು ರಕ್ಷಿಸುವಂತೆ ಕಣ್ಣೀರಿಟ್ಟಿದ್ದಾಳೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ವಿಷಯವೇರಿದ್ದ ಪರಿಣಾಮ ಲಕ್ಷ್ಮೀ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಕ್ಕಳಾದ ತನು ಹಾಗೂ ಗೌತಮಿ ಬಚಾವ್ ಆಗಿದ್ದಾರೆ. ಗೌರಿಬಿದನೂರು ಮೂಲದ ಲಕ್ಷ್ಮೀ, ನಾರಾಯಣ ಎಂಬಾತನ ಜೊತೆ ಎರಡನೇ ಮದುವೆಯಾಗಿದ್ದಳು. ದಂಪತಿಯ ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಆಕೆಗೆ ಪರೀಕ್ಷೆ ಸಮೀಪಿಸುತ್ತಿದೆ. ಚೆನ್ನಾಗಿ ಓದಿಕುಳ್ಳುವಂತೆ ಬುದ್ಧಿ ಹೇಳಿ ಬಿರಿಯಾನಿ ಊಟ ಕೊಟ್ಟು ಬಂದಿದ್ದಳು. ಆತ್ಮಹತ್ಯೆಗೂ ಮುನ್ನ ಲಕ್ಷ್ಮೀ ತನ್ನ ಪತಿಗೆ ಇದು ತನ್ನ ಕೊನೆಯ ಕರೆ ಎಂದು ಸಂದೇಶ ರವಾನಿಸಿದ್ದಾಳೆ. ಬಳಿಕ ತನ್ನ ಅಕ್ಕನಿಗೂ ಕರೆ ಮಾಡಿ ಹಿರಿಯ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಳು. ಬಳಿಕ ವಿಷಬೆರೆಸಿ ಜೂಸ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.