ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರೋಪಿ ಚಿನ್ನಯ್ಯ ಹಾಗೂ ಇತರರು ತಲೆಬುರುಡೆಯನ್ನು ಕೇರಳಕ್ಕೆ ಕೊಂದೊಯ್ದು ಅಲ್ಲಿ ಕಮ್ಯೂನಿಸ್ಟ್ ಸಂಸದ ಸಂತೋಷ್ ಕುಮಾರ್ ಅವರಿಗೆ ತೋರಿಸಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಈಗಾಗಲೇ ಎಸ್ ಐಟಿ ಅಧಿಕಾರಿಗಳು ಒಟ್ಟು 11 ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ನಡುವೆ ಬುರುಡೆ ಗ್ಯಾಂಗ್ ತಲೆಬುರುಡೆಯನ್ನು ಕೇರಳದ ಕಮ್ಯೂನಿಸ್ಟ್ ಸಂಸದ ಸಂತೋಷ್ ಕುಮಾರ್ ಬಳಿ ತೆಗೆದುಕೊಂಡು ಹೋಗಿ ವಿಚಾರ ಪ್ರಸ್ತಾಪಿಸಿದ್ದರು ಎಂದು ತಿಳಿದುಬಂದಿದೆ.
ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಸಂಸದ ಸಂತೋಷ್ ಕುಮಾರ್ ಅವರನ್ನು ಭೇಟಿಯಾಗಿ ಬುರುಡೆ ವಿಚಾರ ಪ್ರಸ್ತಾಪಿಸಿದ್ದರು. ಇದೀಗ ಕೇರಳ ಸಂಸದನನ್ನೂ ಎಸ್ ಐಟಿ ವಿಚಾರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮಧ್ಯೆ ತಲೆಬುರುಡೆ ಕೊಟ್ಟಿದ್ದು ಜಯಂತ್. ನಾನು ಅದನ್ನು ಧರ್ಮಸ್ಥಳದಿಂದ ತಂದೇ ಇಲ್ಲ ಎಂದು ಆರೋಪಿ ಚಿನ್ನಯ್ಯ ಎಸ್ ಐಟಿ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಜಯಂತ್ ಬುರುಡೆಯನ್ನು ಗಿರೀಶ್ ಮಟ್ಟಣ್ಣವರ್ ಕೊಟ್ಟಿದ್ದು ಎಂದಿದ್ದಾರೆ. ಇದನ್ನು ಮಟ್ಟಣ್ಣವರ್ ನಿರಾಕರಿಸಿದ್ದಾರೆ. ಒಟ್ಟಾರೆ ಧರ್ಮಸ್ಥಳ ಬುರುಡೆ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬುದು ಕುತೂಹಲ ಮೂಡಿಸಿದೆ.