ಶಿರಸಿ: ಅಡಿಕೆ ತೋಟಕ್ಕೆ ಬಳಸುತ್ತಿದ್ದ ಏರ್ ಗನ್ ನಿಂದ ವ್ಯಕ್ತಿ ಗುಂಡು ಹಾರಿಸಿದ್ದರಿಂದ 9 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮನಹಳ್ಳಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಹೊಸಕಿತ್ತೂರಿನ ಕರಿಯಪ್ಪ ಬಸಪ್ಪ ಉಂಡಿ(9) ಮೃತಪಟ್ಟ ಬಾಲಕ. ಕೊಲೆ ಆರೋಪದ ಮೇಲೆ ನಿತೀಶ್ ಲಕ್ಷ್ಮಣ ಗೌಡ, ಲೈಸೆನ್ಸ್ ಪಡೆಯದೆ ಏರ್ ಗನ್ ಇಟ್ಟುಕೊಂಡಿದ್ದ ರಾಘವ ಹೆಗಡೆ ಎಂಬುವವರನ್ನು ಬಂಧಿಸಲಾಗಿದೆ.
ಹೊಸ ಕಿತ್ತೂರಿನ ಬಸಪ್ಪ ಉಂಡಿ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಸೋಮನಹಳ್ಳಿಯಲ್ಲಿ ವಾಸವಾಗಿದ್ದು, ರಾಘವೇಂದ್ರ ಹೆಗಡೆ ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ರಾಘವ ಹೆಗಡೆ ಲೈಸೆನ್ಸ್ ಇಲ್ಲದ ಏರ್ ಗನ್ ಇಟ್ಟುಕೊಂಡಿದ್ದು, ತೋಟದಲ್ಲಿ ಮಂಗಗಳನ್ನು ಓಡಿಸಲು ನಿತೀಶ್ ಗೆ ನೀಡಿದ್ದರು.
ಬಸಪ್ಪ ಅವರ ಮಕ್ಕಳು ಶುಕ್ರವಾರ ಆಟವಾಡುತ್ತಾ ನಿತೀಶ್ ಗೌಡ ಬಳಿಗೆ ಬಂದಿದ್ದಾರೆ. ಮಕ್ಕಳನ್ನು ಬೆದರಿಸಿದ ನಿತೀಶ್ ಗೌಡ ಏರ್ ಗನ್ ನಿಂದ ಕರಿಯಪ್ಪನ ಎದೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಬಾಲಕನ ತಾಯಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ನಿತೀಶ್ ಗೌಡ ಮತ್ತು ರಾಘವ ಹೆಗಡೆ ಅವರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.