ಬೆಳಗಾವಿ: ಗ್ರಾಮ ಪಂಚಾಯತ್ ಅಧ್ಯಕ್ಷನೊಬ್ಬ 15 ವರ್ಷದ ಬಾಲಕಿಯನ್ನು ವಿವಾಹವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿರುವುದು ದುರಂತ.
ಬಾಲ್ಯವಿವಾಹ ಪದ್ಧತಿ ರಾಜ್ಯದಲ್ಲಿ ಇನ್ನೂ ಮುಂದುವರೆದಿದೆ. ಅದೂ ಕೂಡ ಶಿಕ್ಷಣ ಪಡೆದವರು, ಜನಪ್ರತಿನಿಧಿಗಳೇ ಅಪ್ರಾಪ್ತ ಬಾಲಕಿಯರನ್ನು ವಿವಾಹವಾಗುತ್ತಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ 15 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯನ್ನು ಬಾಲ್ಯವಿವಾಹ ಮಾಡಿಕೊಂಡಿರುವುದೂ ಅಲ್ಲದೇ ಬಾಲಕಿ ಈಗ ಗರ್ಭಿಣಿ ಎಂದು ತಿಳಿದುಬಂದಿದೆ.
2023ರ ನವೆಂಬರ್ 5ರಂದು ಭೀಮಶಿ ಕಕಾಲಿಮಣಿ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಯಮಕನಮರಡಿ ಠಾಣೆಯಲ್ಲಿ ಭೀಮಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ ಪೋಕ್ಸೋ ಕಾಯ್ದೆಯಡಿ ಕೇಸ್ ಕೂಡ ದಾಖಲಾಗಿದೆ.
ದೂರು ಬಂದ ಬೆನ್ನಲ್ಲೇ ಬಸ್ಸಾಪುರ ಗ್ರಾಮಕ್ಕೆ ನಾಲ್ಕು ಬಾರಿ ಮಕ್ಕಳ ರಕ್ಷಣಾ ತಂಡದ ಅಧಿಕಾರಿಗಳು ಭೇಟಿ ನೀಡಿದೆ. ಆದಾಗ್ಯೂ ಬಾಲಕಿ ಪತ್ತೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಭೀಮಶಿ ಪ್ರಭಾವಿಗಳ ಹೆಸರು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಈ ನಡುವೆ ಭೀಮಶಿ ತನ್ನ ಪತ್ನಿ ಪ್ರಾಪ್ತ ವಯಸ್ಸಿನವಳು ಎಂದು ಆಕೆಯ ನಕಲಿ ಜನನ ಪ್ರಮಾಣ ಪತ್ರ ವೈರಲ್ ಮಾಡಿ ನಾಟಕ ಮಾಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಭೀಮಶಿ ಪತ್ನಿಯ ಹಳೆ ಜನನ ಪ್ರಮಾಣ ಪತ್ರ ಹಾಗೂ ವೈರಲ್ ಆಗಿರುವ ಜನನ ಪ್ರಮಾಣ ಪತ್ರವನ್ನು ಹೋಲಿಕೆ ಮಾಡಿ ನೋಡಿದ್ದು, ಆಕೆ ಅಪ್ರಾಪ್ತ ಬಾಲಕಿ ಎಂಬುದು ದೃಢಪಡಿಸಿಕೊಂಡಿದ್ದಾರೆ.
ಸದ್ಯ ಭೀಮಶಿ ಕಾಲಿಮಣಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಭೀಮಶಿ ನಾಪತ್ತೆಯಾಗಿದ್ದಾನೆ.