ಪುಣೆ: ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪತಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಪತ್ನಿಯೇ ಪತಿಗೆ ಲಿವರ್ ದಾನ ಮಾಡಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ಪತಿ-ಪತ್ನಿ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆ ಬೆನ್ನಲ್ಲೇ ಸಹ್ಯಾದ್ರಿ ಆಸ್ಪತ್ರೆಗೆ ಅಂಗಾಂಗ ಕಸಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಲ್ಲಿಸುವಂತೆ ಆರೋಗ್ಯ ಸೇವೆಗಳ ಉಪ ನಿರ್ದೇಶಕ ಡಾ.ನಾಗನಾಥ್ ಯೆಂಪೆಲ್ಲ ಸೂಚಿಸಿದ್ದಾರೆ. ಈಗಗಾಲೇ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ.
ಬಾಪು ಕೊಮ್ಕರ್ ಹಾಗೂ ಅವರ ಪತ್ನಿ ಕಾಮಿನಿ ಮೃತರು. ಬಾಪು ಕೊಮ್ಕರ್ ಅವರಿಗೆ ಅವರ ಪತ್ನಿ ಕಾಮಿನಿ ತಮ್ಮ ಯಕೃತ್ತಿನ ಒಂದು ಭಾಗವನ್ನು ದಾನಮಾಡಿದ್ದರು. ಆಗಸ್ಟ್ 15ರಂದು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಬಾಪು ಕೊಮ್ಕರ್ ಅವರ ಆರೋಗ್ಯ ಹದಗೆಟ್ಟಿತ್ತು. ಆಗಸ್ಟ್ 17ರಂದು ಅವರು ಕೊನೆಯುಸಿರೆಳೆದಿದ್ದಾರೆ. ಯಕೃತ್ತು ದಾನದ ಬಳಿಕ ಚಿಕಿತ್ಸೆಗೆ ಒಳಗಾಗಿದ್ದ ಕಾಮಿನಿ ಅವರಿಗೆ ಸೋಂಕು ತಗುಲಿತ್ತು. ಚಿಕಿತ್ಸೆ ಫಲಿಸದೇ ಆಗಸ್ಟ್ 21ರಂದು ಅವರು ಕೂಡ ಮೃತಪಟ್ಟಿದ್ದಾರೆ.
ಪ್ರಾಮಾಣಿತ ವೈದ್ಯಕೀಯ ಶಿಷ್ಠಾಚಾರದ ಪ್ರಕಾರವೇ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆಯಾದರೂ ಆರೋಗ್ಯ ಇಲಾಖೆ ವಿವರ ನೀಡಲು ಸೂಚಿಸಿದೆ.