ಬೆಂಗಳೂರು: ರಾಜ್ಯದಲ್ಲಿ ಅಲೆಮಾರಿ ಕುರಿಗಾಹಿಗಳ ಕಲ್ಯಾಣ ಮತ್ತು ಅವರ ವಿರುದ್ಧ ದೌರ್ಜನ್ಯಗಳ ತಡೆ ಕ್ರಮಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧದ ರಕ್ಷಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.
ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರು, ರಾಜ್ಯದಲ್ಲಿ 15,000 ಕುರಿಗಾಹಿಗಳಿರುವ ಅಂದಾಜು ಇದ್ದು, ಇದುವರೆಗೆ 5000 ಮಂದಿ ನೋಂದಾಯಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷದಲ್ಲಿ 242 ಕುರಿಗಾಯಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿದೆ ವಲಸೆ ಹೋಗುವಾಗ ಕುರಿಗಳ ಕಳವು, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಕೃತ್ಯಗಳಾಗಿದ್ದು, ದೌರ್ಜನ್ಯ ತಡೆ ಕ್ರಮದ ಜೊತೆಗೆ ಭದ್ರತೆ ಕಲ್ಪಿಸಲು ವಿಧೇಯಕ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಫಲಾನುಭವಿಗಳಿಗೆ ಕೈಗೆಟುಕುವ ದರದಲ್ಲಿ ವಸತಿಗಾಗಿ ಭೂಮಿ, ಜೀವ ವಿಮೆ, ಆರೋಗ್ಯ ವಿಮೆ, ಪಶು ವಿಮೆ ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯ, ಕೌಶಲ್ಯ ಉನ್ನತೀಕರಣ, ಆಹಾರ ಭದ್ರತೆ, ಕಲ್ಯಾಣ ಕಾರ್ಯಕ್ರಮ ನೀಡಲಾಗುವುದು. ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆ, ಕುರಿಗಾಹಿಗಳ ಉತ್ಪನ್ನಗಳಿಗೆ ಮಾರಾಟಕ್ಕೆ ಬೆಂಬಲ, ನಷ್ಟ ಪರಿಹಾರ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅಲೆಮಾರಿ ಕುರಿಗಾಹಿ ಯಾವುದೇ ಕಾನೂನಾತ್ಮಕ ಆಧಾರವಿಲ್ಲದೆ ಯಾವುದೇ ಸಾರ್ವಜನಿಕ ಸ್ವತ್ತು, ಸರ್ಕಾರಿ ಅಥವಾ ಮೀಸಲು ಅರಣ್ಯ ಹೊರತುಪಡಿಸಿ ಅರಣ್ಯ ಭೂಮಿಗೆ ಪ್ರವೇಶ ನಿರಾಕರಿಸಿದರೆ ಒಂದು ವರ್ಷ ಜೈಲು, 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಕುರಿಗಾಹಿ ಅವಮಾನಿಸಿದರೆ ಆರು ತಿಂಗಳಿಂದ ಐದು ವರ್ಷದವರೆಗೆ ಸೆರೆವಾಸ, ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಎಮ್ಎಸ್ ಕಾಯ್ದೆಯಡಿ ದಂಡನೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಕುರಿಗಾಹಿಗಳು ರಕ್ಷಣೆ ಪಡೆಯಲು ಟೆಂಟ್ ವ್ಯವಸ್ಥೆ ಮಾಡಿಕೊಡಬೇಕು. ಅವರ ಜೊತೆ ಹೆಣ್ಣು ಮಕ್ಕಳು ಇರುತ್ತಾರೆ. ದೌರ್ಜನ್ಯಗಳಾಗದಂತೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಅವರಿಗೆ ಕಾನೂನು ನೆರವು, ವಕೀಲರ ಸೇವೆ, ಎಲ್ಲಾ ಕಡೆ ಲಸಿಕೆ ವ್ಯವಸ್ಥೆ, ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದ್ದಾರೆ.