ಹಿರಿಯೂರು: ಒಳಮೀಸಲಾತಿ ಜಾರಿ ಬಳಿಕ 18 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಹಿರಿಯೂರು ತಾಲೂಕಿನ ತಾಳಮಟ್ಟಿ ಗ್ರಾಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ನಾನು ಶಿಕ್ಷಣ ಸಚಿವನಾಗುವ ಮೊದಲು 55-60 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದವು. ಅದರಲ್ಲಿ 13 ಸಾವಿರ ಶಿಕ್ಷಕರ ಹುದ್ದೆ ಭರ್ತಿಯಾಗಿದೆ. ಪ್ರಸ್ತುತ ಒಳಮೀಸಲಾತಿ ಜಾರಿ ಆದೇಶ ಹೊರಬಂದ ಬಳಿಕ 18 ಸಾವಿರ ಶಿಕ್ಷಕರ ಹುದ್ದೆಗಳನ್ನು 3-4 ತಿಂಗಳ ಒಳಗೆ ಭರ್ತಿ ಮಾಡಲಾಗುವುದು ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೆಲಸ ಕೇವಲ ಸರ್ಕಾರದ ಕೆಲಸವಾಗಬಾರದು. ಸಾರ್ವಜನಿಕರು, ಗ್ರಾಮಸ್ಥರು, ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕು. ಶಿಕ್ಷಣಕ್ಕೆ ಒತ್ತು ನೀಡುವುದು ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿ ಎಂದು ಹೇಳಿದರು.