ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ ಶವ ಹೂತು ಹಾಕಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ಕೈಗೊಂಡಿರುವ ಎಸ್ಐಟಿ ತಂಡಕ್ಕೆ ಪೊಲೀಸ್ ಠಾಣೆ ದರ್ಜೆ, ಬಂಧಿಸುವ, ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಅಧಿಕಾರವನ್ನು ಗೃಹ ಇಲಾಖೆ ನೀಡಿದೆ.
ಸರ್ಕಾರದಿಂದ ರಚಿಸಲಾದ ವಿಶೇಷ ತನಿಖಾ ತಂಡವನ್ನು ಪೊಲೀಸ್ ಠಾಣೆ ಎಂದು ಈ ವಿಶೇಷ ತಂಡಕ್ಕೆ ನೇಮಿಸಲಾದ ಪೋಲಿಸ್ ನಿರೀಕ್ಷಕರ ದರ್ಜೆಯ, ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ಠಾಣಾ ಅಧಿಕಾರಿ ಎಂದು ಘೋಷಿಸಲಾಗಿದೆ. ವಿಶೇಷ ತನಿಖಾ ತಂಡಕ್ಕೆ ತನಿಖಾ ಕ್ರಮಗಳನ್ನು ಅನುಸರಿಸಿ ಸಂಬಂಧಿಸಿದ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವ ಅಧಿಕಾರವನ್ನು ನೀಡಲಾಗಿದೆ.