ಪುತ್ತೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭವತಿಯನ್ನಾಗಿಸಿದ್ದ ಪ್ರಕರಣದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ದಿಂಡೂರು ಗ್ರಾಮದ ಗೌಡಗೇರಿ ಓಣಿ ನಿವಾಸಿ ಪೀರೇಶ್ ಯಾನೆ ಮಾಲೋತ್ತರ (35) ಎಂಬ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಪೀರೇಶ್ ಬಡಗನ್ನೂರು ಗ್ರಾಮದಲ್ಲಿ ಕೆಂಪುಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ. 2017ರಲ್ಲಿ ಬಾಲಕಿಯನ್ನು ಪುಸಲಾಯಿಸಿ ತನ್ನ ಬಾಡಿಗೆ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಬಳಿಕ ಹೆದರಿಸಿ ಬೆದರಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿ ಮಾಡಿದ್ದ. ಸಂಪ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, 35 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 5 ವರ್ಷ ಜೈಲುಶಿಕ್ಷೆ ವಿಸ್ತರಣೆ ಮಾಡಲಾಗುವುದು ಎಂದು ತೀರ್ಪು ನೀಡಿದೆ.