ಮಂಗಳೂರು: ಚಾರ್ಮಾಡಿ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ ಕೈಗೊಂಡಿದ್ದ 103 ಪ್ರವಾಸಿಗರನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ, ಮೂಡಿಗೆರೆ, ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶವಾಗಿರುವ ಬಿದಿರುತಳದಲ್ಲಿ ಶನಿವಾರ ಅನುಮತಿ ಇಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ 103 ಮಂದಿ ಪ್ರವಾಸಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಪ್ರಮುಖ ಐಟಿ ಕಂಪನಿಯ ಉದ್ಯೋಗಿಗಳು ನಿಷೇಧಿತ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುತ್ತಿರುವ ಮಾಹಿತಿ ಪಡೆದ ಬಾಳೂರು ಹಾಗೂ ಬಣಕಲ್ ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿ ಎರಡು ಪ್ರವಾಸಿ ಬಸ್ ಗಳು ಮತ್ತು ಎರಡು ಪಿಕಪ್ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಆಳ ಕಾಡುಗಳಲ್ಲಿ ನಡೆದುಕೊಂಡು ಹೋಗುವುದು ಅರಣ್ಯ ಕಾಯ್ದೆಗೆ ವಿರುದ್ಧವಾಗಿದ್ದು, ಇಲಾಖೆಯ ಪೂರ್ವಾನುಮತಿ ಪಡೆದುಕೊಳ್ಳದೆ ನಿಷೇಧಿತ ಪ್ರದೇಶದಲ್ಲಿ ಪ್ರವೇಶಿಸುವುದು ಅರಣ್ಯ ಕಾಯ್ದೆಯ ಉಲ್ಲಂಘನೆಯಾಗಿದೆ. ಸ್ಥಳೀಯ ವ್ಯಕ್ತಿ ಈ ನಿಷೇಧಿತ ಪ್ರದೇಶಕ್ಕೆ ಟ್ರಕ್ಕಿಂಗ್ ಕರೆದುಕೊಂಡು ಹೋಗಿದ್ದ ಎಂದು ಹೇಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.