ಭೂ ಸ್ವಾಧೀನ ಅರ್ಜಿ 8 ಬಾರಿ ವಜಾ ಆದರೂ 9ನೇ ಸಲ ಅರ್ಜಿ ಸಲ್ಲಿಸಿದ್ದಕ್ಕೆ 10 ಲಕ್ಷ ರೂ. ದಂಡ: ಹೈಕೋರ್ಟ್ ಆದೇಶ

ಬೆಂಗಳೂರು: ಜಮೀನು ಭೂಸ್ವಾಧೀನ ಕೈಬಿಡುವ ಬಗ್ಗೆ 8 ಸಲ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗಳು ವಜಾಗೊಂಡಿರುವ ವಿಚಾರವನ್ನು ಮುಚ್ಚಿಟ್ಟು 9ನೇ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದಲ್ಲಿ ವೆಂಕಟೇಶ ಮತ್ತು ಹನುಮಂತ ಎಂಬುವರ ಎರಡು ಎಕರೆಗೂ ಹೆಚ್ಚು ಜಮೀನನ್ನು ಲೇಔಟ್ ನಿರ್ಮಿಸಲು ಜಿಲ್ಲಾಡಳಿತ 1986ರಲ್ಲಿ ವಶಪಡಿಸಿಕೊಂಡು ಪರಿಹಾರ ನೀಡಿದ್ದು, ಅವರ ನಿಧನದ ಬಳಿಕ ಅವರ ವಾರಸುದಾರರಾದ ಗಂಗಮ್ಮ ಮತ್ತು ಕುಟುಂಬ ಸದಸ್ಯರು ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ ಜಿಲ್ಲಾಡಳಿತ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.

ಈ ಬಗ್ಗೆ ಗಂಗಮ್ಮ ಮತ್ತು ಅವರ ಕುಟುಂಬದವರು 8 ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯದಲ್ಲಿ ಅರ್ಜಿಗಳು ವಜಾಗೊಂಡಿದ್ದವು. ಇತ್ತೀಚೆಗೆ ಗಂಗಮ್ಮ ಮತ್ತು ಅವರ ಕುಟುಂಬದವರು ಅರ್ಜಿ ಸಲ್ಲಿಸಿದ್ದು, ಇವರ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಗವಿಪುರಂ ಎಕ್ಸ್ ಟೆನ್ಷನ್ ಹೌಸ್ ಬಿಲ್ಡಿಂಗ್ ಆಪರೇಟಿವ್ ಸೊಸೈಟಿ ಪರ ವಕೀಲರು ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿರುವ ವಿಚಾರವನ್ನು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.

ನಿಜಾಂಶ ಮರೆಮಾಚಿ ಒಂದೇ ವಿಚಾರಕ್ಕೆ ಬೇರೆ ಬೇರೆ ಪದ ಬಳಕೆ ಮಾಡಿ ಮತ್ತೆ ಮತ್ತೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಪರೋಕ್ಷವಾಗಿ ಮೋಸ ಮಾಡುವ ಪ್ರಯತ್ನ ನಡೆದಿದೆ. ಇಂತಹ ಅರ್ಜಿದಾರರಿಗೆ ಸೂಕ್ತ ಪಾಠ ಕಲಿಸಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, 4 ವಾರದ ಒಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ 10 ಲಕ್ಷ ರೂಪಾಯಿ ಪಾವತಿಸಲು ಆದೇಶಿಸಿ ಅರ್ಜಿಯನ್ನು ವಜಾಗೊಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read