ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರ ದುರಂತ ಸಂಭವಿಸಿದ್ದು, ಅಡಿಕೆ ಶೆಡ್ ನಿರ್ಮಾಣದ ವೇಳೆ ವಿದ್ಯುತ್ ಶಾಕ್ ತಗುಲಿ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ರೈತ ಶ್ರೀನಿವಾಸ್ (35) ಕಾರ್ಮಿಕ ನಜೀರ್ (30) ಫಾರುಕ್ (30 ) ಎಂದು ಗುರುತಿಸಲಾಗಿದೆ. ಗ್ರಾಮದ ಶ್ರೀನಿವಾಸ್ ಎಂಬುವವರ ತೋಟದಲ್ಲಿ ಅಡಿಕೆ ಶೆಡ್ ನಿರ್ಮಿಸುವಾಗ ಈ ದುರ್ಘಟನೆ ನಡೆದಿದೆ.
ಅಡಿಕೆ ಶೆಡ್ ನಿರ್ಮಾಣದ ವೇಳೆ ಕಬ್ಬಿಣದ ಕಂಬ ನಿಲ್ಲಿಸುವಾಗ ವಿದ್ಯುತ್ ತಂತಿ ತಗುಲಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂವರಿಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

