ಕಾರವಾರ: ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭೂಕುಸಿತ ಕಡಲ್ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು 800 ಕೋಟಿ ರೂ. ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ಮಳೆಯಿಂದ ಗುಡ್ಡ ಕುಸಿತಕ್ಕೊಳಗಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರೂರು, ದೇವಿಮನೆಘಟ್ಟ, ಬೆಣ್ಣೆ ಹೊಳೆ ಸೇತುವೆ ಸ್ಥಳಗಳಿಗೆ, ಕುಮಟಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಮಾತನಾಡಿದರು.
ರಾಜ್ಯದ 6 ಜಿಲ್ಲೆಗಳಲ್ಲಿ ಭೂಕುಸಿತ ಸಮಸ್ಯೆ ತೀವ್ರವಾಗಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ 500 ಕೋಟಿ ರೂ. ಮೀಸಲಿಡಲಾಗುತ್ತಿದೆ. ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ಸಮಸ್ಯೆ ತಡೆಗೆ ಪ್ರತಿ ಜಿಲ್ಲೆಗೆ 100 ಕೋಟಿ ರೂ.ನಂತೆ 300 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಅಧಿಕಾರಿಗಳ ಹಿಂದೇಟಿಗೆ ಕಾರಣ ಏನೆಂದು ಡೀಟೇಲ್ಸ್ ಆಗಿ ಗೊತ್ತಿಲ್ಲ. ಜಿಲ್ಲೆಯ ನಾಲ್ಕು ಎಸಿಗಳ ಪೈಕಿ ಇಬ್ಬರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎರಡು ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳಿದ್ದಾರೆ.