ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ದುರ್ಬಳಕೆ ತಡೆಯಲು ನಗರ ಪ್ರದೇಶಗಳಲ್ಲಿ ಕೊಳವೆ ಬಾವಿಯಿಂದ ಹೊರತೆಗೆಯುವ ನೀರಿನ ಬಳಕೆಗೆ ಮೀಟರ್ ಅಳವಡಿಸಿ ದರ ನಿಗದಿ ಮಾಡಲು ಸರ್ಕಾರ ಮುಂದಾಗಿದೆ.
ಕೇಂದ್ರ ಅಂತರ್ಜಲ ಪ್ರಾಧಿಕಾರ ಅಂತರ್ಜಲ ಬಳಕೆ ನಿರ್ಬಂಧಿಸಲು ಹೊರಡಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಕೊಳವೆಬಾವಿ ನೀರಿನ ಬಳಕೆ ಪ್ರಮಾಣ ಅಳೆಯಲು ಡಿಜಿಟಲ್ ಟೆಲಿಮೆಟ್ರಿ ಅಳವಡಿಸಿ ದರ ನಿಗದಿ ಮಾಡಲಾಗುವುದು.
ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಮಂಡಿಸಿದ ಪ್ರಸ್ತಾಪಕ್ಕೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ರಾಜ್ಯದಲ್ಲಿ ನೀರಿನ ಲಭ್ಯತೆ ಮತ್ತು ಕೊರತೆ ಇರುವ ಪ್ರದೇಶಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದು, ಗ್ರಾಮೀಣ ಮತ್ತು ನಗರಗಳಲ್ಲಿ ವೈಯಕ್ತಿಕ ಗೃಹ ಉಪಯೋಗಿ ಅಂತರ್ಜಲ ಬಳಕೆಗೆ ವಿನಾಯಿತಿ ನೀಡಲಾಗಿದೆ.
ಗ್ರಾಮೀಣ ನೀರು ಸರಬರಾಜು, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸೇನೆ, ಪೊಲೀಸ್ ಕಟ್ಟಡ, ಸಂಸ್ಥೆ ಚಟುವಟಿಕೆ, ಕೃಷಿ ಚಟುವಟಿಕೆ, ಕಡಿಮೆ ಪ್ರಮಾಣದಲ್ಲಿ ನೀರು ಬಳಸುವ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಗೃಹ ಉಪಯೋಗಿ ಉದ್ದೇಶಕ್ಕಾಗಿ ಅಂತರ್ಜಲ ಬಳಸುವ ಕೈಗಾರಿಕೆ ಗಣಿಗಾರಿಕೆ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಸೇರಿ ಕೆಲವು ಉದ್ದೇಶದ ಬಳಕೆಗೆ ವಿನಾಯಿತಿ ನೀಡಲಾಗಿದೆ.