ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯ ಅಬ್ಬರ ಮುಂದುವರೆದಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಬಿರುಗಾಳಿ ಸಹಿತ ಭಾರಿ ಮಳೆಗೆ ಕಾರಿನ ಮೇಲೆ ಬೃಹತ್ ಮರ ಬಿದ್ದು, ಗರ್ಭಿಣಿ ಮಹಿಳೆ ಕ್ಷಣಾರ್ಧದಲ್ಲಿ ಪಾರಾಗಿದ್ದು, ಆಕೆಯ ಅತ್ತೆ ಕಾರಿನಲ್ಲಿ ಸಿಲುಕಿ ಹೊರಬರಲಾಗದೇ ಪರದಾಡಿದ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರದ ನಗರದ ಪಿಕಳೆ ಆಸ್ಪತ್ರೆ ಎದುರು ಈ ಘಟನೆ ನಡೆದಿದೆ. 8 ತಿಂಗಳ ಗರ್ಭಿಣಿ ಚಕಪ್ ಗಾಗಿ ಆಸ್ಪತ್ರೆಗೆ ಕಾರಿನಲ್ಲಿ ಬಂದಿದ್ದರು. ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಮರ ಬಿಳುತ್ತಿರುವುದನ್ನು ಗಮನಿಸಿದ ಕಾರು ಚಾಲಕ ಕೂಗಿಕೊಳ್ಳುತ್ತಿದ್ದಂತೆ ಗರ್ಭಿಣಿ ಮಹಿಳೆ ತಕ್ಷಣ ಕಾರಿನ ಡೋರ್ ತೆಗೆದು ಕೆಳಗಿಳಿದಿದ್ದಾರೆ. ಗರ್ಭಿಣಿಯ ಅತ್ತೆ ಲಕ್ಷ್ಮೀ ಎಂಬುವವರು ಕಾರಿನಲ್ಲಿ ಸಿಲುಕಿಕೊಂಡಿದ್ದು, ಹೊರಬರಲಾಗದೇ ಪರದಾಡಿದ್ದಾರೆ.
ಸ್ಥಳೀಯರು, ಪೊಲೀಸ್ ಸಿಬ್ಬಂದಿ, ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.