ಅಮರಾವತಿ: ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ನಡೆದ 3,200 ಕೋಟಿ ರೂ.ಗಳ ಮದ್ಯ ಹಗರಣದಲ್ಲಿ ವೈಎಸ್‌ಆರ್‌ಸಿಪಿ ಲೋಕಸಭಾ ಸದಸ್ಯ ಪಿ.ವಿ. ಮಿಥುನ್ ರೆಡ್ಡಿ ಅವರನ್ನು ಆಂಧ್ರಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿತ ಮದ್ಯ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಹಲವು ಗಂಟೆಗಳ ಕಾಲ ಮಿಥುನ್ ರೆಡ್ಡಿ ಅವರನ್ನು ವಿಚಾರಣೆ ನಡೆಸಿ, ರಾತ್ರಿ ವಿಜಯವಾಡದಲ್ಲಿ ಬಂಧಿಸಿದೆ.
ಹೌದು ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೃಹ ಸಚಿವೆ ವಂಗಲಪುಡಿ ಅನಿತಾ ತಿಳಿಸಿದ್ದಾರೆ.
ಮಿಥುನ್ ರೆಡ್ಡಿ ಆಂಧ್ರಪ್ರದೇಶದ ರಾಜಂಪೇಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ವೈಎಸ್‌ಆರ್‌ಸಿಪಿ ನಾಯಕ ವಿಚಾರಣೆಗೆ ಹಾಜರಾಗಲು ವಿಜಯವಾಡಕ್ಕೆ ಆಗಮಿಸಿದ್ದು, ಇತರ ಆರೋಪಿಗಳಾದ ಧನುಂಜಯ ರೆಡ್ಡಿ, ಕೃಷ್ಣ ಮೋಹನ್ ರೆಡ್ಡಿ ಮತ್ತು ಬಾಲಾಜಿ ಗೋವಿಂದಪ್ಪ ಅವರನ್ನು ಬಂಧಿಸಿದ ನಂತರ ಅವರ ವಿಚಾರಣೆ ನಡೆಸಿ ಬಂಧಿಸಲಾಗಿದೆ.
ಮಿಥುನ್ ರೆಡ್ಡಿ ವಿರುದ್ಧದ ಪ್ರಕರಣವು ದೊಡ್ಡ ಸೇಡಿನ ಪಿತೂರಿಯ ಭಾಗವಾಗಿದೆ ಎಂದು ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ ಮಲ್ಲಾಡಿ ವಿಷ್ಣು ತಿಳಿಸಿದ್ದಾರೆ.