ಸೇಲಂ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಜಾಮೀನು ಮೇಲೆ ಜೈಲಿನಿಂದ ಹೊರ ಬಂದು ಪತ್ನಿ ಜೊತೆ ಹೋಟೆಲ್ ಗೆ ಹೋಗಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ತಮಿಳುನಾಡಿನ ಸೇಲಂ ನಲ್ಲಿ ಈ ಘಟನೆ ನಡೆದಿದೆ. ಮೃತ ಆರೋಪಿ ಮದನ್ ಅಲಿಯಾಸ್ ಅಪ್ಪುಲು ಎಂದು ಗುರುತಿಸಲಾಗಿದೆ. ತೂತುಕುಡಿ ಮೂಲದ ಮದನ್, ಕೊಲೆ ಆರೋಪದಲ್ಲಿ ಜೈಲು ಸೇರಿದ್ದ. ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾಗಿದ್ದ.
ಜಾಮೀನು ಸಿಕ್ಕಿ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕಿತ್ತು. ಎಂದಿನಂತೆ ಪತ್ನಿ ಜೊತೆ ಠಾಣೆಗೆ ಬಂದು ಸಹಿ ಹಾಕಿ ಬಳಿಕ ಸಮೀಪವೇ ಇದ್ದ ಹೋಟೆಲ್ ಗೆ ಹೋಗಿ ತಿಂಡಿ ತಿನ್ನುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಹೋಟೆಲ್ ನಲ್ಲಿ ಕುಳಿತಿದ್ದ ಮದನ್ ಹಾಗೂ ಪತ್ನಿಯನ್ನು ಮೂವರು ಸುತ್ತುವರೆದು ಮಾರಕಾಸ್ತ್ರಗಳಿಂದ ಮದನ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.