ಧಾರವಾಡ: ನೀರೆಂದು ಭಾವಿಸಿ ಆಸಿಡ್ ಸೇವಿಸಿದ ವಿದ್ಯಾರ್ಥಿ ತೀವ್ರ ಅಸ್ವಸ್ಥನಾಗಿರುವ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ.
ಕುಬೇರ ಲಮಾಣಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಮೂಲದ ಕುಬೇರ ಲಮಾಣಿ ಧಾರವಾಡದ ವಿದ್ಯಾಗಿರಿ ಬಳಿಯ ಹಾಸ್ಟೇಲ್ ನಲ್ಲಿ ವಾಸವಾಗಿ, ಅಂಜುಮನ್ ಕಾಲೇಜಿನಲ್ಲಿ ಬಿಎ ಓದುತ್ತಿದ್ದ. ಅನಾರೋಗ್ಯದ ಕಾರಣಕ್ಕೆ ಔಷಧ ತೆಗೆದುಕೊಳ್ಳುವಾಗ ಹಾಸ್ಟೇಲ್ ನಲ್ಲಿದ್ದ ಆಸಿಡ್ ನ್ನು ನೀರೆಂದು ಭಾವಿಸಿ ಸೇವಿಸಿದ್ದಾನೆ. ತೀವ್ರವಾಗಿ ಅಸ್ವಸ್ಥನಾಗಿ ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸ್ಟೆಲ್ ಸಿಬ್ಬಂದಿ, ಕುಡಿಯುವ ನೀರಿನ ಪಕ್ಕದಲ್ಲೇ ಆಸಿಡ್ ನನ್ನು ಇಟ್ಟಿದ್ದರು. ಗೊತ್ತಾಗದೇ ವಿದ್ಯಾರ್ಥಿ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದಾನೆ. ಜೂನ್ 30ರಂದು ಘಟನೆ ನಡೆದಿದ್ದರೂ ಧಾರವಾಡ ಜಿಲ್ಲಾಡಳಿತ ಹಾಸ್ಟೇಲ್ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.