ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಇರುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಯೂನಿಟ್ ಟೆಸ್ಟ್ ಪದ್ಧತಿ ಜಾರಿಗೊಳಿಸಲು ಸರ್ಕಾರ ಕ್ರಮಕೈಗೊಂಡಿದೆ.
ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ(LBA) ಅನುಷ್ಠಾನಗೊಳ್ಳಲಿದ್ದು, ವಿದ್ಯಾರ್ಥಿಗಳು ಪ್ರತಿ ಅಧ್ಯಯನ ಮುಗಿದ ನಂತರ ಕಿರುಪರೀಕ್ಷೆ ಬರೆಯಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಜಾರಿಯಲ್ಲಿದೆ.
ವಿದ್ಯಾರ್ಥಿಗಳಿಗೆ ಪ್ರತಿ ಅಧ್ಯಯನ ಮುಗಿದ ನಂತರ ಪರೀಕ್ಷೆ ಮಾಡುವುದರಿಂದ ಅರ್ಥೈಸಿಕೊಳ್ಳುವುದು, ಕಲಿಕೆಯ ಗುಣಮಟ್ಟದ ಬಗ್ಗೆ ಖಾತ್ರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ ಜಾರಿಗೊಳಿಸುತ್ತಿದೆ. ಪ್ರಸಕ್ತ 2025- 26ನೇ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.
ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬೇಕಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಶಾಲೆಗಳಿಗೆ ನೀಡಲಿದೆ. ಶಾಲೆಗಳು ಇದರ ಆಧಾರದ ಮೇಲೆ ಪರೀಕ್ಷೆ, ಮೌಲ್ಯಾಂಕನ ನಡೆಸಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅವರ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ(SATS) ಅಪ್ಲೋಡ್ ಮಾಡಬೇಕಿದೆ.
ರಾಜ್ಯದಲ್ಲಿ 46, 757 ಸರ್ಕಾರಿ ಶಾಲೆಗಳಿದ್ದು, 42.92 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆರಂಭದಿಂದಲೇ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡಿದಲ್ಲಿ ಮುಂಬರುವ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಯೋಜನೆ ರೂಪಿಸಿದೆ.
ವಿದ್ಯಾರ್ಥಿಗಳಲ್ಲಿ ಕಲಿಕೆ, ಗ್ರಹಿಕೆ ಮಟ್ಟವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಎಫ್ಎ ಮತ್ತು ಎಸ್ಎ ಜಾರಿಗೆ ತರಲಾಗಿದೆ. ಒಂದು ವರ್ಷದಲ್ಲಿ ಎಫ್ಎ -4, ಎಸ್ಎ-2 ನಡೆಸಲಾಗುತ್ತಿತ್ತು. ಈಗ ಪಾಠ ಆಧಾರಿತ ಮೌಲ್ಯಾಂಕನ ಹೆಸರಲ್ಲಿ ಹಳೆ ಪದ್ಧತಿಯನ್ನು ಶಿಕ್ಷಣ ಇಲಾಖೆ ಮತ್ತೆ ಅನುಷ್ಠಾನಗೊಳಿಸುತ್ತಿದೆ ಎನ್ನುವ ಅಭಿಪ್ರಾಯ ಕೂಡ ಕೇಳಿ ಬಂದಿದೆ.
ಪ್ರತಿ ಪರೀಕ್ಷೆ 30 ಅಂಕಗಳಿಗೆ ಮೀಸಲಾಗಿದ್ದು, 25 ಪ್ರಶ್ನೆಗಳು ಇರುತ್ತವೆ. ಇವುಗಳಲ್ಲಿ ಸುಲಭ ಶೇಕಡ 75, ಸಾಮಾನ್ಯ ಶೇಕಡ 25, ಕಠಿಣ ಶೇಕಡ 10 ಎನ್ನುವ ಮಾದರಿಯಲ್ಲಿ ಪ್ರಶ್ನೆಗಳನ್ನು ವಿಭಜಿಸಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುವುದು. ಬಹುತೇಕ ಪ್ರಶ್ನೆಗಳು ಬಹು ಆಯ್ಕೆ ಮಾದರಿಗಳಿಂದ ಕೂಡಿರುತ್ತವೆ.
ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಕೂಡ ಬದಲಾಗಲಿದೆ. ಬಹು ಆಯ್ಕೆ ಮಾದರಿ, ಒಂದು ವಾಕ್ಯದಲ್ಲಿ ಉತ್ತರಿಸಿ, ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ, ಸಂದರ್ಭ ಮತ್ತು ಸ್ವಾರಸ್ಯ, 8 ಅಥವಾ 10 ವಾಕ್ಯಗಳಲ್ಲಿ ಉತ್ತರಿಸಿ, ಗದ್ಯಭಾಗ ಓದಿ ಉತ್ತರ ಬರೆಯುವಂತಹ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.