ಲಖನೌ: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿ ವರ ಸೇರಿದಂತೆ 8 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪೊರದೇಶದಲ್ಲಿ ನಡೆದಿದೆ.
ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವರನೊಂದಿಗೆ ಎಸ್ ಯುವಿ ಕಾರಿನಲ್ಲಿ ಕುಟುಂಬ ಹೊರಟಿತ್ತು. ಕಾರು ಕಾಲೇಜಿನ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವರ ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಜೆವಾನೈ ಗ್ರಾಮದಲ್ಲಿ ಇಂದು ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಜನತಾ ಇಂಟರ್ ಕಾಲೇಜು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಕಾಲೇಜಿನ ಕಾಂಪೌಂಡ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವಾಹನದಲ್ಲಿ ಹತ್ತು ಜನರಿದ್ದರು. ಎಲ್ಲರೂ ಒಂದೇ ಕುಟುಂಬದವರಾಗಿದ್ದರು. ಮೃತರಲ್ಲಿ 24 ವರ್ಷದ ವರ ಸೂರಜ್ ಕೂಡ ಸೇರಿದ್ದಾರೆ. ಸಂಭಾಲ್ ನ ಹರ್ ಗೋವಿಂದಪುರ ಗ್ರಾಮದಿಂದ ಬುಡೌನ್ ಜಿಲ್ಲೆಯ ಸಿರ್ತೌಲ್ ನಲ್ಲಿರುವ ವಧುವಿನ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬದಲ್ಲಿ ದುಃಖ ಆವರಿಸಿದೆ.