HomeLatest NewsGOOD NEWS: ದುರ್ಗಮ, ಸಂಪರ್ಕ ರಹಿತ ಪ್ರದೇಶಗಳಲ್ಲೂ ಮನೆ ಬಳಿಗೆ ಆರೋಗ್ಯ ಸೇವೆ

GOOD NEWS: ದುರ್ಗಮ, ಸಂಪರ್ಕ ರಹಿತ ಪ್ರದೇಶಗಳಲ್ಲೂ ಮನೆ ಬಳಿಗೆ ಆರೋಗ್ಯ ಸೇವೆ

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತೆಗೆದುಕೊಂಡು ಹೋದ ಹೆಗ್ಗಳಿಕೆ ನಮ್ಮ ಸರ್ಕಾರದ್ದು. ಗೃಹ ಆರೋಗ್ಯ ಯೋಜನೆ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಜೊತೆ ಜೊತೆಗೆ ಇದೀಗ ನಮ್ಮ ಆರೋಗ್ಯ ಇಲಾಖೆಯು ಸಂಚಾರಿ ಆರೋಗ್ಯ ಘಟಕಗಳ ಮೂಲಕ ಸುಮಾರು 15.97 ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸಂಚಾರಿ ಆರೋಗ್ಯ ಘಟಕಗಳ ವಿಶೇಷತೆ

ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳು, ಸಂಕಷ್ಟದಲ್ಲಿರುವ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು(ಪಿವಿಟಿಜಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಅವರ ಮನೆಯ ಬಾಗಿಲಲ್ಲೇ ನೀಡುವ ಉದ್ದೇಶದಿಂದ 82 ಸಂಚಾರಿ ಆರೋಗ್ಯ ಘಟಕಗಳು ಕಾರ್ಯಾಚರಣೆ ನಡೆಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವು ಸಂಚಾರಿ ಚಿಕಿತ್ಸಾಲಯಗಳಾಗಿದ್ದು, ಈ ಘಟಕಗಳಲ್ಲಿ ರೋಗ ತಪಾಸಣೆ, ರೋಗ ನಿರ್ಣಯ, ಚಿಕಿತ್ಸೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳು ಸಿಗಲಿವೆ.

ಈ ಸಂಚಾರಿ ಆರೋಗ್ಯ ಘಟಕಗಳಲ್ಲಿ ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು, ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ.

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಸಂಚಾರಿ ಆರೋಗ್ಯ ಘಟಕಗಳು ಕಾರ್ಯ ನಿರ್ವಹಿಸಲಿವೆ.

ಸಂಚಾರಿ ಆರೋಗ್ಯ ಘಟಕಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳಂತೆ ಈ ಘಟಕಗಳು ಕಾರ್ಯ ನಿರ್ವಹಿಸಲಿವೆ.

ಈ ಹಿಂದೆ ಪಿಪಿಪಿ ಮಾದರಿಯಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ನಿರ್ವಹಿಸಲಾಗುತ್ತಿತ್ತು. ಪಾರದರ್ಶಕತೆ ಮತ್ತು ಕಾರ್ಯಾಚರಣಾ ವೆಚ್ಚ ಉಳಿತಾಯ ಮಾಡಲು ಇನ್ನು ಮುಂದೆ ಆರೋಗ್ಯ ಇಲಾಖೆಯ ವತಿಯಿಂದಲೇ ನಿರ್ವಹಿಸಲು ತೀರ್ಮಾನಿಸಲಾಗಿದೆ.

82 ಸಂಚಾರಿ ಆರೋಗ್ಯ ಘಟಕಗಳ ಮೂಲಕ ನಿರ್ದಿಷ್ಟ ದುರ್ಬಲ ಆದಿವಾಸಿ ಬುಡಕಟ್ಟು ಗುಂಪು, ಪರಿಶಿಷ್ಟ ಜಾತಿ/ಪಂಗಡ ಸಮುದಾಯಗಳಿಗೆ ತಪಾಸಣೆ, ಚಿಕಿತ್ಸೆ, ಶಿಫಾರಸು ಸೇರಿದಂತೆ ಮನೆ ಬಳಿಯಲ್ಲಿ ಆರೋಗ್ಯ ಸೇವೆ ಒದಗಿಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular