ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ನಿಗದಿಗೆ ಮೊದಲು ಹಾಲಿ ಇರುವ ಬಿಬಿಎಂಪಿ ವ್ಯಾಪ್ತಿಗೆ ಮುಂದಿನ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಲಾಗಿದೆ.
ಕುಮಾರ ಪಾರ್ಕ್ ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಲಾಗಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ನಿಗದಿ, 5 ಪಾಲಿಕೆಗಳ ರಚನೆ ಜೊತೆಗೆ ಹಾಲಿ ಇರುವ ಬಿಬಿಎಂಪಿ ವ್ಯಾಪ್ತಿಗೆ ಚುನಾವಣೆ ಘೋಷಿಸುವ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗಿದೆ.
ನಾಲ್ಕು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ಪಾಲಿಕೆಗಳನ್ನು ರಚಿಸಿ ಚುನಾವಣೆ ಘೋಷಿಸಿ ಆ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ವಿಸ್ತರಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್, ಬಿ.ಎಸ್. ಸುರೇಶ್, ಶಾಸಕರಾದ ಎಂ. ಕೃಷ್ಣಪ್ಪ, ಎಸ್.ಟಿ. ಸೋಮಶೇಖರ್, ಪ್ರಿಯಕೃಷ್ಣ, ಎ.ಸಿ. ಶ್ರೀನಿವಾಸ್, ಶಿವಣ್ಣ, ರಿಜ್ವಾನ್ ಅರ್ಷದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.