ತಿರುವನಂತಪುರಂ: ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ಕೇರಳ ಮೂಲದ ನರ್ಸ್ ರಂಜಿತಾ ಬಗ್ಗೆ ವ್ಯಂಗ್ಯವಾಡಿದ್ದ ತಹಶೀಲ್ದಾರ್ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕು ಡೆಪ್ಯೂಟಿ ತಹಶೀಲ್ದಾರ್ ಪವಿತ್ರನ್ ಅಮಾನತುಗೊಂಡಿರುವ ಅಧಿಕಾರಿ. ಕೇರಳ ಸರ್ಕಾರಕ್ಕೆ ರಜೆ ನಿಲ್ಲಿಸಿ ಹೋಗಿದಕ್ಕೆ ರಂಜಿತಾ ಸಾವನ್ನಪ್ಪಿದ್ದಾರೆ ಎಂದು ಪವಿತ್ರನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಅಲ್ಲದೇ ಮತ್ತೊಂದು ಪೋಸ್ಟ್ ನಲ್ಲಿ ಆಕೆ ಇನ್ನೂ ಎತ್ತರಕ್ಕೆ ಏರಲಿ ಎಂದು ಬರೆದುಕೊಂಡಿದ್ದರು. ತಹಶೀಲ್ದಾರ್ ಪವಿತ್ರನ್ ಪೋಸ್ಟ್ ಗೆ ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ವಿಮಾನ ದುರಂತದಲ್ಲಿ ಸಾವನ್ನಪ್ಪಿದ ನರ್ಸ್ ಬಗ್ಗೆ ಅಧಿಕಾರಿಯೊಬ್ಬರ ವ್ಯಂಗ್ಯ ತೀವ್ರ ಆಕ್ರೋಶಕ್ಕೆ ಕಾರಣವಗಿತ್ತು. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ದೂರು ನೀಡಲಾಗಿತ್ತು.
ಇದರ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇಂಬಶೇಖರನ್ ಪವಿತ್ರನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಯುಕೆಯಲ್ಲಿ ನರ್ಸ್ ಆಗಿದ್ದ ರಂಜಿತಾ ರಜೆಯ ಮೇಲೆ ಕೇರಳಕ್ಕೆ ಬಂದಿದ್ದರು. ರಂಜಿತಾ ಅವರಿಗೆ ಕೇರಳ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಇದೇ ಕಾರಣಕ್ಕೆ ಸಹಿ ಹಾಕಲು ರಜೆ ಮೇಲೆ ಕೇರಳಕ್ಕೆ ಆಗಮಿಸಿದ್ದರು. ಆದರೆ ಯುಕೆ ಆಸ್ಪತ್ರೆಯಲ್ಲಿ ಈಗಾಗಲೇ ಮಾಡಿಕೊಂಡಿದ್ದ ಒಪ್ಪಂದವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅವರು ಯುಕೆಗೆ ಹೋಗಿಬರಲು ಏರ್ ಇಂಡಿಯಾ ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ಏರ್ ಇಂಡಿಯಾ ವಿಮಾನ ಅಹಮದಾಬಾದ್ ನಲ್ಲಿ ಪತನಗೊಂಡು ದುರಂತದಲ್ಲಿ ರಂಜಿತಾ ಕೂಡ ಮೃತಪಟ್ಟಿದ್ದಾರೆ.